ಬೆಂಗಳೂರು: ರಾಜ್ಯಸಭೆ, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಗಿದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಆಕಾಂಕ್ಷಿಗಳ ಅಹವಾಲು ಆಲಿಸುವ ಗೋಜು ಇಲ್ಲದೇ ನಿರಾಳರಾಗಿ ಬೆಳಗ್ಗೆ ಕರುವಿನೊಂದಿಗೆ ಆಟವಾಡುತ್ತಾ ವಾಕಿಂಗ್ ಮಾಡಿದ್ದಾರೆ.
ರಾಜ್ಯಸಭೆ ಚುನಾವಣೆ ಘೋಷಣೆಯಾದ ದಿನದಿಂದ, ಉಮೇಶ್ ಕತ್ತಿ, ರಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಎಂ. ಶಂಕರ್ ಹೀಗೆ ಒಬ್ಬರಲ್ಲಾ ಇಬ್ಬರು ನಿತ್ಯ ಸಿಎಂ ಬೆಳಗಿನ ವಾಯುವಿಹಾರದ ಸಮಯದಲ್ಲಿ ಭೇಟಿ ನೀಡುತ್ತಿದ್ದರು. ಟಿಕೆಟ್ ಕುರಿತು ಸಿಎಂ ಜೊತೆ ಮಾತುಕತೆ ನಡೆಸುತ್ತಿದ್ದರು. ವಾಕಿಂಗ್ ಮಾಡುತ್ತಲೇ ಬಿಎಸ್ವೈ ಟಿಕೆಟ್ ಆಕಾಂಕ್ಷಿಗಳನ್ನು ಮಾತನಾಡಿ ಕಳುಹಿಸುತ್ತಿದ್ದರು.
ಆದರೆ, ಇಂದು ಅಂತಹ ಯಾವುದೇ ಸನ್ನಿವೇಶ ಇರಲಿಲ್ಲ. ಯಾವ ಅತಿಥಿಯಾಗಲಿ, ಆಕಾಂಕ್ಷಿಯಾಗಲಿ, ಅಸಮಾಧಾನಿತರಾಗಲಿ ಬೆಳಗ್ಗೆ ಸಿಎಂ ನಿವಾಸಕ್ಕೆ ಭೇಟಿ ನೀಡಲಿಲ್ಲ, ಇದರಿಂದಾಗಿ ಸಿಎಂ ಇಂದು ಮುಂಜಾನೆ ನಿರಾಳತೆಯಿಂದ ವಾಕಿಂಗ್ ಮಾಡಿದರು.
ಪ್ರತಿ ದಿನದಂತೆ ಇಂದು ಕೂಡ ತಮ್ಮ ನೆಚ್ಚಿನ ಗಿರ್ ತಳಿಯ ಕರು ಭೀಮನೊಂದಿಗೆ ಸಿಎಂ ಕೆಲ ಕ್ಷಣ ಕಳೆದರು. ಮುಖ್ಯಮಂತ್ರಿಗಳನ್ನು ನೋಡುತ್ತಿದ್ದಂತೆ ಅವರತ್ತ ಭೀಮ ಓಡೋಡಿ ಬಂದ. ಇದು ಆ ಕರುವಿನೊಂದಿಗೆ ಸಿಎಂಗೆ ಇರುವ ಮಮತೆಗೆ ಸಾಕ್ಷಿಯಾಗಿದೆ. ಹೀಗೆ ಬಂದ ಕರುವಿನ ಮೈ ನೇವರಿಸುತ್ತಾ ಸ್ವಲ್ಪ ಸಮಯ ರಾಜಕೀಯ ಜಂಜಾಟ ಬದಿಗಿಟ್ಟು ಕಾಲಕಳೆದಿದ್ದಾರೆ ಸಿಎಂ ಯಡಿಯೂರಪ್ಪ.
ಇತ್ತೀಚೆಗಷ್ಟೇ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಗಿರ್ ತಳಿಯ ಎರಡು ಹಸುಗಳನ್ನು ಸಿಎಂಗೆ ಉಡುಗೊರೆಯಾಗಿ ನೀಡಿದ್ದರು. ಹಸುಗಳ ಜೊತೆ ಒಂದು ಕರುವನ್ನೂ ಸಿಎಂ ನಿವಾಸಕ್ಕೆ ಕರೆತರಲಾಗಿತ್ತು. ಹಸುಗಳಿಗೆ ಕಾವೇರಿ,ಕೃಷ್ಣೆ ಎಂದು ಹೆಸರಿಡಲಾಗಿದ್ದು, ಕರುವಿಗೆ ಭೀಮ ಎಂದು ಹೆಸರಿಡಲಾಗಿದೆ. ಸಿಎಂ ಅಧಿಕೃತ ನಿವಾಸ ಕಾವೇರಿಯ ಆವರಣದಲ್ಲೇ ಕೊಟ್ಟಿಗೆ ನಿರ್ಮಿಸಿ ಹಸುಗಳನ್ನು ಕಟ್ಟಲಾಗಿದೆ.