ಬೆಂಗಳೂರು: ನೂತನ ಸರ್ಕಾರ ರಚನೆಯಾಗಿ ಎಂಟು ದಿನದ ನಂತರ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಗಸ್ಟ್ 5 ರಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಅಗಸ್ಟ್ 5 ರಂದು ರಾತ್ರಿ 7.40ಕ್ಕೆ ದೆಹಲಿಗೆ ಹೊರಡಲಿರುವ ಅವರು ಕರ್ನಾಟಕ ಭವನದಲ್ಲಿ ತಂಗಲಿದ್ದಾರೆ. ಮರುದಿನ 9.45ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರ ಜೊತೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸುವ ಯಡಿಯೂರಪ್ಪನವರು ನಂತರ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗಸ್ಟ್ 7ರಂದು ದೆಹಲಿಯ ಕರ್ನಾಟಕ ಭವನದಲ್ಲಿ ಕೇಂದ್ರ ಸಚಿವರ ಜೊತೆ ಸಭೆ ನಡೆಸಲಿದ್ದು, ಇದೇ ಸಂದರ್ಭದಲ್ಲಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಸಂಪುಟ ಸೇರಲಿರುವ ಅಂತಿಮ ಪಟ್ಟಿಯೊಂದಿಗೆ ಯಡಿಯೂರಪ್ಪನವರು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಮೊದಲ ಪಟ್ಟಿ ರೆಡಿ : ಸಂಪುಟ ರಚನೆಯಲ್ಲಿ ತರಾತುರಿ ಮಾಡದೆ ಯೋಚಿಸಿ ಹೆಜ್ಜೆ ಇಟ್ಟಿರುವ ಸಿಎಂ ಯಡಿಯೂರಪ್ಪ, ಮೊದಲ ಪಟ್ಟಿ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಪುಟ ರಚನೆಯಲ್ಲಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುವುದರಿಂದ ಮೊದಲ ಪಟ್ಟಿ ಜೊತೆ ಸಿಎಂ ಬಿಎಸ್‌ವೈ ದೆಹಲಿಗೆ ತೆರಳುತ್ತಿದ್ದಾರೆ. ಈ ಬಾರಿ ಸಂಪುಟ ರಚನೆ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿರುವ ವರಿಷ್ಠರು, ವಿದ್ಯಾರ್ಹತೆ, ಜಾತಿ, ಪಕ್ಷ ನಿಷ್ಠೆ, ಸಾಮಾರ್ಥ್ಯದ ಮಾನದಂಡದ ಆಧಾರದಲ್ಲಿ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದಲ್ಲಿ ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿದ್ದು, ಅದಕ್ಕಾಗಿ ಲಾಬಿಯೂ ಜೋರಾಗಿಯೇ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಿರಿ ಯಾರ್ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.