ಬೆಂಗಳೂರು: ಸಮಯ ಪರಿಪಾಲನೆಯನ್ನು ಮುಂದುವರೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕೋರ್ ಕಮಿಟಿ ಸಭೆಗೆ ಕೇವಲ ಎರಡು ನಿಮಿಷ ತಡವಾಗಿದ್ದಕ್ಕೆ ಕಾರು ಇಳಿಯುತ್ತಿದ್ದಂತೆ ಓಡುತ್ತಾ ತೆರಳಿದರು.
ಈ ಹಿಂದೆ ಸಭೆ ಸಮಾರಂಭಗಳಿಗೆ ಸಮಯವಾಗುತ್ತದೆ ಎಂದು ನಿವಾಸದಿಂದ ಹೊರ ಬರುತ್ತಿದ್ದಂತೆ ಓಡಿ ಕಾರು ಹತ್ತಿ ಅಧಿಕಾರಿಗಳನ್ನೂ ಓಡುವಂತೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮತ್ತೊಮ್ಮೆ ರನ್ನಿಂಗ್ ರೇಸ್ ಮಾಡಿದರು.
ಎರಡು ಗಂಟೆಗೆ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕರೆಯಲಾಗಿದ್ದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಿಎಂ 2 ಗಂಟೆ ನಂತರ 2 ನಿಮಿಷವಾಗಿದ್ದಕ್ಕೆ ಕಾರು ಇಳಿದು ಎರಡು ಹೆಜ್ಜೆ ಓಡಿದರು ನಂತರ ಲಿಫ್ಟ್ ಸಮೀಪಕ್ಕೂ ಜೋರು ಹೆಜ್ಜೆ ಹಾಕಿ ತೆರಳಿದರು. ಬಳಿಕ ಮೂರನೇ ಮಹಡಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಭಾಗಿಯಾದರು.
ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಈಶ್ವರಪ್ಪ, ಸಿ.ಟಿ ರವಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಎಂ.ಉದಾಸಿ ಆಹ್ವಾನಿತರಾಗಿ ಭಾಗಿಯಾಗಿದ್ದಾರೆ.