ಬೆಂಗಳೂರು: ತೀವ್ರ ಮಳೆಹಾನಿ ಸಂಭವಿಸಿರುವ ಆರು ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಅವಲೋಕನ ಮಾಡಿದ್ದು, ತುರ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಡಲಾಗಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಹಾನಿ ವ್ಯಾಪಕವಾಗಿ ಸಂಭವಿಸುತ್ತಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು.
ನೆರೆಹಾನಿ ಸ್ಥಿತಿ, ಮಳೆ ಪ್ರಮಾಣ, ಪರಿಹಾರ ಕಾರ್ಯಗಳು, ಸರ್ಕಾರದಿಂದ ಬೇಕಿರುವ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದರು. ಬೆಳಗಾವಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮಳೆ ಅನಾಹುತಗಳ ಕುರಿತು ಮಾಹಿತಿ ಪಡೆದುಕೊಂಡು ಮೊದಲ ಆದ್ಯತೆಯಾಗಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಬೆಳಗ್ಗೆಯಷ್ಟೇ ದೂರವಾಣಿ ಮೂಲಕ ನೆರೆಹಾನಿ ಸ್ಥಿತಿಗತಿ ವಿವರ ಪಡೆದಿದ್ದ ಸಿಎಂ, ನಂತರ ಎಲ್ಲ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ವಕ್ಷೇತ್ರದಲ್ಲಿದ್ದು ಪರಿಹಾರ ಕಾರ್ಯಾಚರಣೆಗೆ ನೆರವು ನೀಡುವಂತೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಮತ್ತೆ ಜಿಲ್ಲಾಡಳಿತದ ಜೊತೆ ವಿಡಿಯೋ ಸಂವಾದ ನಡೆಸಿ ನೆರೆಪೀಡಿತ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.
ನೆರೆ ಪೀಡಿತ ಪ್ರದೇಶದ ಜನರ ಸ್ಥಳಾಂತರಕ್ಕೆ ಸೇನಾ ಹೆಲಿಕ್ಯಾಪ್ಟರ್:
ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರ ಸ್ಥಳಾಂತರ ಮಾಡಲು ಸೇನಾ ಹೆಲಿಕ್ಯಾಪ್ಟರ್ಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರನ್ನು ಶೀಘ್ರವೇ ತೆರುವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಹಾಗು ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಸೂಚಿಸಿದರು.
ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳನ್ನು ಅಗತ್ಯ ಇರುವ ಜಿಲ್ಲೆಗಳಿಗೆ ತುರ್ತು ಕಳುಹಿಸಲು ಸೂಚಿಸಿದ ಸಿಎಂ, ಕಾಳಜಿ ಕೇಂದ್ರಗಳನ್ನು ಆದಷ್ಟು ಹೆಚ್ಚು ತೆರೆದು ಸರ್ವ ಸನ್ನದ್ದವಾಗಿಟ್ಟುಕೊಳ್ಳಬೇಕು. ಅಧಿಕಾರಿಗಳು ರಜೆ ಹಾಕದೆ ಕೆಲಸ ಮಾಡಬೇಕು, ಹಣಕಾಸಿನ ನೆರವು ಅಗತ್ಯವಿದ್ದಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮುಂದಿನ 48 ಗಂಟೆ ಏನು ಆಗುತ್ತೆ ಅನ್ನೋದನ್ನ ಊಹೆ ಮಾಡಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.