ಬೆಂಗಳೂರು: ಜನವರಿ 29 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆಳಗಾವಿ ಜಿಲ್ಲಾ ಪ್ರವಾಸ ನಿಗದಿಯಾಗಿದ್ದು, ಅಂದು ಕೂಡಾ ಸಚಿವ ಸಂಪುಟ ವಿಸ್ತರಣೆಯಾಗುವುದು ಅನುಮಾನವಾಗಿದೆ.
ಜನವರಿ 29 ರಂದು ಶುಭ ದಿನವಾಗಿದ್ದು, ಅಂದು ಸಂಪುಟ ವಿಸ್ತರಣೆ ಮಾಡಿದರೆ ಸಂಕಷ್ಟಗಳು ದೂರವಾಗಲಿದೆ ಎಂಬ ಜ್ಯೋತಿಷಿಗಳ ಸಲಹೆಯಂತೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಚಿಂತನೆ ನಡೆಸಿದ್ದರು. ಆದರೆ, ಇದೀಗ ಅಂದೂ ಕೂಡ ಸಂಪುಟ ವಿಸ್ತರಣೆ ಅನುಮಾನವಾಗಿದೆ.
ನಾಳೆ ಬೆಂಗಳೂರಿನಲ್ಲಿಯೇ ಇರುವ ಸಿಎಂ 29 ರಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬಳಿಕ ನೇರವಾಗಿ ಶಿವಮೊಗ್ಗಕ್ಕೆ ತೆರಳಲಿರುವ ಸಿಎಂ ಬಳಿಕ ಮಂಗಳೂರಿಗೆ ತೆರಳಲಿದ್ದಾರೆ. 29 ರಂದು ಮೂರು ಜಿಲ್ಲೆಗಳ ಪ್ರವಾಸ ನಿಗದಿಪಡಿಸಿ ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಹಾಗಾಗಿ ಅಂದು ಸಂಪುಟ ವಿಸ್ತರಣೆ ಅನುಮಾನವಾಗಿದೆ.
ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದಾಗಿ ಇಂದು ಸಿಎಂ ಎರಡು ಬಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಜನವರಿ 30 ರಂದು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.