ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ದುರಂತದ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ.
ಕಳೆದ 24 ಗಂಟೆಯಲ್ಲಿ 20 ಕ್ಕೂ ಹೆಚ್ಚು ಕೋವಿಡ್, ಕೋವಿಡೇತರ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಘಟನೆಗೆ ಆಮ್ಲಜನಕ ಖಾಲಿಯಾಗಿದ್ದೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದರೆ ಮೊದಲೇ ಏಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ?, ಆಕ್ಸಿಜನ್ ಸಿಲಿಂಡರ್ ಪೂರೈಕೆ ಸಮಸ್ಯೆಯಾಗಿದ್ದನ್ನು ಯಾಕೆ ಸರ್ಕಾರದ ಗಮನಕ್ಕೆ ತರಲಿಲ್ಲ ಎಂದು ಡಿಸಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಯಡಿಯೂರಪ್ಪ ನಿರ್ದೇಶನ ನೀಡಿದ್ದು ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.