ಬೆಂಗಳೂರು : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತ ಪ್ರಕರಣದ ಹಿನ್ನೆಲೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಿಎಂ ಯಡಿಯೂರಪ್ಪ ವಿವರಣೆ ಪಡೆದರು. ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಿದ್ದಾರೆ.
ಕಳೆದ ರಾತ್ರಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ರೋಗಿಗಳು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ತಮ್ಮ ಅಧಿಕೃತ ನಿವಾಸ ಕಾವೇರಿಗೆ ಆರೋಗ್ಯ ಸಚಿವ ಸುಧಾಕರ್ ಅವರನ್ನು ಕರೆಸಿಕೊಂಡು, ಘಟನೆ ಸಂಬಂಧ ಚರ್ಚೆ ನಡೆಸಿದರು.
ಘಟನೆಗೆ ಏನು ಕಾರಣ, ಆಮ್ಲಜನಕ ಕೊರತೆ ಸೃಷ್ಟಿಯಾಗಿದ್ದು ಹೇಗೆ? ಎರಡೂ ಜಿಲ್ಲೆಗಳ ನಡುವೆ ಸಮನ್ವಯತೆ ಇರಲಿಲ್ಲವೇ ಎನ್ನುವ ಕುರಿತು ಸಮಾಲೋಚನೆ ನಡೆಸಿದರು.
ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆ ಮಾಡುವ ಏಜೆನ್ಸಿಗೆ ಮೌಖಿಕ ಸೂಚನೆ ನೀಡಿ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆ ಮಾಡದಂತೆ ತಿಳಿಸಿದ್ದರು ಎನ್ನಲಾಗಿದೆ. ಇದರ ಬಗ್ಗೆ ಸಿಎಂ ಕಿಡಿಕಾರಿದ್ದಾರೆ ಎನ್ನಲಾಗಿದೆ.
ಇದನ್ನೆಲ್ಲಾ ನಂತರ ನೋಡೋಣ ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿ ಎಂದು ಸಿಎಂ ಯಡಿಯೂರಪ್ಪ ಸಚಿವ ಸುಧಾಕರ್‌ಗೆ ತಿಳಿಸಿದ್ದಾರೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ಗೂ ಜಿಲ್ಲೆಗೆ ತೆರಳುವಂತೆ ಸಿಎಂ ಸೂಚಿಸಿದ್ದಾರೆ.
ಸಿಎಂ ಭೇಟಿ ನಂತರ ಮಾತನಾಡಿದ ಸಚಿವ ಸುಧಾಕರ್, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗಿ ದುರಂತ ಸಂಭವಿಸಲು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ನಡುವಿನ ಸಮನ್ವಯತೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡೂ ಜಿಲ್ಲೆಗಳ ನಡುವೆ ಸಮನ್ವಯತೆ ಕೊರತೆಯಿಂದ ಆಮ್ಲಜನಕ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರಬಹುದು. ಈ ಹೊಂದಾಣಿಕೆ ನ್ಯೂನತೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಚಾಮರಾಜನಗರಕ್ಕೆ ಹೋಗಿ ಸ್ಪಷ್ಟ ಮಾಹಿತಿ ನೀಡುತ್ತೇನೆ ಎಂದರು.
ಇದನ್ನೂ ಓದಿ : ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು