ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆ.7 ರಂದು ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಶಾಸಕರ ಅಸಮಾಧಾನ, ಸಮನ್ವಯತೆ ಕೊರತೆ ಹಿನ್ನೆಲೆ ಸಿಎಂ ಇದೀಗ ಶಾಸಕರು ಹಾಗೂ ಸಚಿವರ ಸಭೆ ನಡೆಸಲಿದ್ದಾರೆ. ಅನುದಾನ ಬಿಡುಗಡೆ, ಸ್ಪಂದಿಸದ ಸಚಿವರ ಸಂಬಂಧ ಎಲ್ಲಾ ಗೊಂದಲ, ಅಸಮಾಧಾನಕ್ಕೆ ಮದ್ದು ಅರೆಯುವ ಕೆಲಸ ಮಾಡಲಿದ್ದಾರೆ.
ಮೊನ್ನೆ ದೆಹಲಿಗೆ ಹೋಗಿ ಸಚಿವರು, ಶಾಸಕರು ವರಿಷ್ಠರ ಜೊತೆ ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಿತ ಶಾಸಕರು, ಸಚಿವರುಗಳ ಜೊತೆ ಸಭೆ ನಡೆಸಿ, ಗೊಂದಲ ನಿವಾರಿಸಲು ಮುಂದಾಗಿದ್ದಾರೆ. ಸೋಮವಾರ ನಡೆಯುವ ಸಭೆಯಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ಗೊಂದಲ ನಿವಾರಣೆ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.00ರ ವರೆಗೆ ಹಾಗೂ ಸಂಜೆ 4.00 ಗಂಟೆಯಿಂದ 7 ಗಂಟೆಯವರೆಗೆ ಸಭೆ ನಡೆಯಲಿದೆ. ಸುದೀರ್ಘ ಚರ್ಚೆಯಲ್ಲಿ ಶಾಸಕರ ಬೇಡಿಕೆ, ಅನುದಾನ, ಅಭಿವೃದ್ಧಿ ಕಾಮಗಾರಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆ ಮೂಲಕ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರ ಮಧ್ಯೆ ಇರುವ ಗೊಂದಲ ನಿವಾರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಗಡುವು: ಹೊಸಕೋಟೆಯ ಏತ ನೀರಾವರಿ ಯೋಜನೆಯ 43 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಯನ್ನು ಅ. 31ರ ಒಳಗಾಗಿ ಮುಗಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿ ಯೋಜನೆಯ ಕಾಮಗಾರಿಗಳ ಕುರಿತಾಗಿ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆಯನ್ನು ನಡೆಸಿದ ಅವರು, ಕಾಮಗಾರಿಗಳ ಪ್ರಸ್ತುತ ಹಂತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹೊಸಕೋಟೆ ಏತ ನೀರಾವರಿ ಯೋಜನೆಯನ್ನು 28/09/2022ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಷರತ್ತನ್ನ ವಿಧಿಸಿ ಟೆಂಡರ್ ನೀಡಲಾಗಿತ್ತು. ಆದರೆ, ಕಾಮಗಾರಿಗೆ ನೀಡಿದ್ದ ಅವಧಿ ಮುಗಿದು 10 ತಿಂಗಳು ಹೆಚ್ಚಾಗಿದೆ. ಕಾಮಗಾರಿಯನ್ನು ನೀಡಿದ್ದ ಸಮಯಾವಕಾಶದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು.
ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ: ಗುತ್ತಿಗೆದಾರರ ಕಾಮಗಾರಿಯನ್ನ ಆಯಾ ಸಮಯದಲ್ಲಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿಯನ್ನ ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯ. ಕಾಮಗಾರಿ ವೇಗ ಕಡಿಮೆಯಾದಾಗ ಎಚ್ಚರಿಸುವ ಮೂಲಕ ಅದನ್ನ ಪೂರ್ಣಗೊಳಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನ ಅ.31ರ ಒಳಗಾಗಿ ಪೂರ್ಣಗೊಳಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಏತ ನೀರಾವರಿ ಯೋಜನೆಯ ಅಡಿಯಲ್ಲಿನ 2 ಕಿ.ಮೀ ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸಲು ಇದ್ದಂತಹ ಅಡೆತಡೆಗಳನ್ನು ಸಭೆಯಲ್ಲಿ ನಿವಾರಿಸಲಾಯಿತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ ಇಲಾಖೆಯ ವತಿಯಿಂದ ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸೋಮವಾರದಿಂದ ಕಾಮಗಾರಿ ಪ್ರಾರಂಭಿಸಬಹುದಾಗಿದೆ ಎಂದು ಹೇಳಿದರು. ಇನ್ನು ಹೆಬ್ಬಾಳ– ನಾಗವಾರ ವ್ಯಾಲಿ ಯೋಜನೆಯ ಬಾಕಿ ಕಾಮಗಾರಿಗಳ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಸೆ.15 ರಂದು ಮತ್ತೊಮ್ಮೆ ಕಾಮಗಾರಿ ಪರಿಶೀಲನೆ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಇದನ್ನೂ ಓದಿ: ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ ಹೊರತು ನಾವಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ