ಬೆಂಗಳೂರು : ಡಿಕೆಶಿ ಕೇಸ್ ವಾಪಸ್ ಸಂಬಂಧ ಕೋರ್ಟ್ನಲ್ಲಿ ಚಾಲೆಂಜ್ ಮಾಡಲಿ, ಅಂತಿಮ ತೀರ್ಮಾನ ಮಾಡುವುದು ಕೋರ್ಟ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆಶಿ ಕೇಸ್ ವಾಪಸ್ ಸಂಬಂಧ ಕೋರ್ಟ್ಗೆ ಯತ್ನಾಳ್ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಾಪ ಅವರು ಕೋರ್ಟ್ಗೆ ಹೋಗಲು ನಾವು ಯಾಕೆ ಬೇಡ ಅಂತೀವಿ. ಕೋರ್ಟ್ಗೆ ಹೋಗೋದು ಚಾಲೆಂಜ್ ಮಾಡೋದು, ಲಾಯರ್ ಇಟ್ಟುಕೊಂಡು ವಾದ ಮಾಡೋದು ಅವರಿಗೆ ಬಿಟ್ಟಿದ್ದು. ಅವರ ಇಷ್ಟ ಅದು. ಅದಕ್ಕೆ ನಾವು ಬೇಡ ಅನ್ನೋಕೆ ಆಗುತ್ತಾ?. ಅಂತಿಮ ತೀರ್ಮಾನ ಮಾಡೋದು ಕೋರ್ಟ್. ಇದು ಲೀಗಲ್ ಅಥವಾ ಇಲ್ಲೀಗಲ್ ಅಂತ ತೀರ್ಮಾನಿಸುವುದು ಕೋರ್ಟ್. ಈಗ ಸಾಂಕ್ಷನ್ ಕೊಟ್ಟಿರುವುದನ್ನ ಇಲ್ಲೀಗಲ್ ಅಂತ ನಾವು ತೀರ್ಮಾನ ಕೈಗೊಂಡಿದ್ದೇವೆ. ಅವರು ಹೋಗಿ ಚಾಲೆಂಜ್ ಮಾಡಲಿ ಎಂದರು.
ಜಾಹೀರಾತು ವಿಚಾರ.. ಆಯೋಗ ಹೇಳಿದೆ - ನಾವು ನಿಲ್ಲಿಸಿದ್ದೇವೆ: ತೆಲಂಗಾಣ ಜಾಹೀರಾತು ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬ್ರೇಕ್ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾಡಿದ ಸಾಧನೆಯನ್ನ ನಾವು ಹಾಕಿದ್ದೇವೆ. ತೆಲಂಗಾಣ ಮತದಾರರ ಮೇಲೆ ನಾವು ಪ್ರಭಾವ ಬೀರಿದ್ದಲ್ಲ. ಚುನಾವಣಾ ಆಯೋಗ ಹೇಳಿದೆ. ನಾವು ನಿಲ್ಲಿಸಿದ್ದೇವೆ ಅಷ್ಟೇ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.
ನಿಗಮ ಮಂಡಳಿ ಪಟ್ಟಿ ವಿಚಾರ: ನಿಗಮ ಮಂಡಳಿ ನೇಮಕ ವಿಚಾರಕ್ಕೆ ತಮ್ಮನ್ನು ಪರಿಗಣಿಸಿಲ್ಲ ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ , ಪರಮೇಶ್ವರ್ ಅಷ್ಟೇ ಅಲ್ಲ, ಯಾರ ಅಭಿಪ್ರಾಯವನ್ನೂ ನಾವು ಪಡೆದಿಲ್ಲ. ಇನ್ನೂ ಕೂಡ ನಿಗಮ ಮಂಡಳಿ ಪಟ್ಟಿ ಪ್ರಾಥಮಿಕ ಹಂತದಲ್ಲಿದೆ. ಇನ್ನೂ ಫೈನಲ್ ಆಗಿಲ್ಲ. ಯಾರ ಅಭಿಪ್ರಾಯವನ್ನೂ ನಾವು ಪಡೆದಿಲ್ಲ. ಫೈನಲ್ ಪಟ್ಟಿ ಆಗಿಲ್ಲ. ಈಗ ನಾನು ಅದರ ಬಗ್ಗೆ ಕಾಮೆಂಟ್ ಮಾಡೋದು ಸರಿಯಲ್ಲ ಎಂದು ಹೇಳಿದರು.
![ಮುಖ್ಯಮಂತ್ರಿ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/28-11-2023/20132974_thumbppp.jpg)
ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಮಾತನಾಡಿದ್ದನ್ನು ನಾನು ನೋಡಿಲ್ಲ. ನಾನು ನೋಡದೇ ರಿಯಾಕ್ಟ್ ಮಾಡೋಕೆ ಆಗಲ್ಲ. ಯಾವ ಉದ್ದೇಶದಿಂದ ಮಾತನಾಡಿದ್ದಾರೆ ಅನ್ನೋದು ನಾನು ನೋಡ ಬೇಕಲ್ವಾ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಬ್ರಾಂಡ್ ಬೆಂಗಳೂರು ನಂಬರ್ ಒನ್ ಆಗಿಸಬೇಕಿದೆ : ದೇಶದಲ್ಲಿ ಬ್ರಾಂಡ್ ಬೆಂಗಳೂರನ್ನು ನಂಬರ್ ಒನ್ ಆಗಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ "ಮುನಿಸಿಪಾಲಿಕಾ - 2023" 17 ನೇ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ - ಗ್ರಾಮೀಣ ಭಾರತವೂ ಸುಸ್ಥಿರ ಬೆಳವಣಿಗೆ ಕಾಣಬೇಕು. ರಾಜ್ಯದ 316 ನಗರಗಳಿಗೆ ಅಗತ್ಯ ಎಲ್ಲ ನಾಗರಿಕ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಶೇ. 38ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರೆಲ್ಲರಿಗೂ ಟ್ರಾಫಿಕ್ ಕಿರಿಕಿರಿ ಇಲ್ಲದ, ಸುಗಮ ಸಂಚಾರ, ಅಗತ್ಯ ಕಸ ವಿಲೇವಾರಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಸೇರಿ ನಾಗರಿಕ ಸವಲತ್ತುಗಳನ್ನು ಒದಗಿಸುವುದು ಸವಾಲಿನ ಕೆಲಸ. ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ನಾವು ನಗರ ಪ್ರದೇಶದ ಕುಡಿಯುವ ನೀರಿಗೆ 9 ಸಾವಿರ ಕೋಟಿ ಕೊಡಲು ನಿರ್ಧರಿಸಿರುವುದು ಸೇರಿದಂತೆ, ನಗರ ಜೀವನಮಟ್ಟ ಇನ್ನಷ್ಟು ಸುಗಮಗೊಳಿಸಲು ಅಗತ್ಯ ಇರುವ ಎಲ್ಲ ವಲಯಗಳಿಗೂ ಸರ್ಕಾರ ಅಗತ್ಯ ಅನುದಾನವನ್ನು ಒದಗಿಸುತ್ತಿದೆ ಎಂದು ಹೇಳಿದರು.
ಈ ಬಾರಿ ನಾವು ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯುತ್ತಿದ್ದೇವೆ. ಬೆಲೆ ಏರಿಕೆ ಹೆಚ್ಚಾಗಿದ್ದರೂ ಹಿಂದಿನ ದರದಲ್ಲೇ ಬಡವರು, ಮಧ್ಯಮ ವರ್ಗದವರಿಗೆ ಊಟ-ಉಪಹಾರದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂದು ಬಿಜೆಪಿ ಸಾಬೀತು ಪಡಿಸಿಲಿ: ಸಿದ್ದರಾಮಯ್ಯ ಸವಾಲು