ಬೆಂಗಳೂರು: ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಖಾಲಿ ಇದ್ದಾಗ ಚರ್ಚೆ ಮಾಡಿದರೆ ಅರ್ಥ ಇರುತ್ತದೆ. ಈಗ ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ. ಇದರಲ್ಲಿ ಯಾವುದೇ ಅನುಮಾನ, ಸಂದೇಹ ಬೇಡ ಎಂದು 5 ವರ್ಷವೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, ಆಡಳಿತ ನಡೆಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗುರಿ ಇದೆ. ಸರ್ಕಾರ ಸುಭದ್ರವಾಗಿರಬೇಕೆನ್ನುವುದು ಇಬ್ಬರ ಗುರಿ. ಮುಂದಿನ ಸಿಎಂ ಬಗ್ಗೆ ಕೆಲವರ ಅಭಿಪ್ರಾಯ ಇರುತ್ತದೆ. ಏನೇ ತೀರ್ಮಾನವಾದರೂ ಎಐಸಿಸಿ ಅಧ್ಯಕ್ಷರು, ಹೈಕಮಾಂಡ್ ಮಾಡಬೇಕು ಎಂದರು.
ಜಾತಿಗಣತಿ ವಿರೋಧಿಸಿ ಒಕ್ಕಲಿಗರ ಮುಖಂಡರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಶ್ರೀಗಳು ಸಮಾಜದ ಅಭಿಪ್ರಾಯ ತಿಳಿಸಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶ ಏನಿಲ್ಲ. ಕಾಂತರಾಜ್ ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿ ಸರ್ಕಾರದ ಮುಂದೆ ಬಂದಿಲ್ಲ. ಸರ್ಕಾರ ಇನ್ನೂ ಸಮ್ಮತಿಸಿಲ್ಲ. ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಾಜದ ಅಭಿಪ್ರಾಯವನ್ನ ಹೇಳಿದ್ದಾರೆ ತಪ್ಪೇನಿಲ್ಲ. ವರದಿ ಬಂದ ಮೇಲೆ ತಾನೇ ನನಗೆ ಗೊತ್ತಾಗೋದು. ವರದಿಯಲ್ಲಿ ಏನಿದ್ಯೋ ನನಗೇನು ಗೊತ್ತು? ಕಾಂತರಾಜ್ ಸಮಿತಿಗೆ ಸರ್ಕಾರ ಇನ್ನೂ ಒಪ್ಪಿಲ್ಲ. ಊಹಾಪೋಹಗಳಲ್ಲಿ ತೇಲುತ್ತಿದ್ದೇವೆ. ಕಾಂತರಾಜ್ ಸಮಿತಿ ವರದಿ ರಾಜಕೀಯ ವಸ್ತುವಲ್ಲ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ಇದನ್ನೂ ಓದಿ: '5 ವರ್ಷ ನಾನೇ ಸಿಎಂ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು