ಬೆಂಗಳೂರು: ಬೆಲೆ ಎರಿಕೆ ವಿರುದ್ಧ ಎತ್ತಿನ ಬಂಡಿ ಪ್ರತಿಭಟನೆ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸದನಕ್ಕೆ ಬರಲಿ ಅಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಕಾಂಗ್ರೆಸ್ ಪ್ರತಿಭಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನಾಯಕರ ಎತ್ತಿನ ಗಾಡಿ ಪ್ರತಿಭಟನೆಗೆ ಕಿಡಿಕಾರಿದರು. ಅವರು ಹಿಂದಿನ ಯುಪಿಎ ಸರ್ಕಾರ ಇದ್ದಾಗ ಈ ರೀತಿಯ ಪ್ರತಿಭಟನೆ ಮಾಡಬೇಕಿತ್ತು. ಬೆಲೆ ಏರಿಕೆ ಆಗಿದ್ದು, ಈಗಷ್ಟೇ ಅಲ್ಲ ಬಹಳ ದಿನಗಳೇ ಆಗಿವೆ. ಆದರೆ, ಆಗ ಸುಮ್ಮನಿದ್ದ ಕಾಂಗ್ರೆಸ್ಸಿಗರು ಈಗ ಹೋರಾಟ ಮಾಡುತ್ತಿದ್ದಾರೆ. ಸದನಕ್ಕೆ ಬರಲಿ, ಅವರಿಗೆ ನಾನು ಅಲ್ಲಿಯೇ ತಕ್ಕ ಉತ್ತರ ಕೊಡುತ್ತೇನೆ ಎಂದರು. ಯಾದಗಿರಿ ಮಹಿಳೆ ಮೇಲೆ ದೌರ್ಜನ್ಯ ವಿಚಾರ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು. ಯಾವುದೇ ಪ್ರತಿಕ್ರಿಯೆ ಕೊಡದೇ ತೆರಳಿದರು.
ಬೆಳಗಾವಿ ಪಾಲಿಕೆ ಸದಸ್ಯರ ಭೇಟಿ:
ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದ 35 ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಭಿನಂದನೆ ಸಲ್ಲಿಸಿದರು. ಇದೇ ಮೊದಲ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದೆ ಎಂದು ವಿಧಾನಸೌಧದಲ್ಲಿ ಪಾಲಿಕೆ ಸದಸ್ಯರ ಜೊತೆ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಬಿ.ಸಿ. ಪಾಟೀಲ, ಬೈರತಿ ಬಸವರಾಜ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ ಮತ್ತು ಇತರರು ಇದ್ದರು.
ಇದನ್ನೂ ಓದಿ: ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯನ್ನ ನಗ್ನಗೊಳಿಸಿ ಮನ ಬಂದಂತೆ ಥಳಿಸಿದ ದುರುಳರು