ಬೆಂಗಳೂರು: ಸಾರಿಗೆ ನೌಕರರ ಮತ್ತೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನೌಕರರ ಬೇಡಿಕೆ ಪರಿಗಣಿಸುವ ಕುರಿತು ಸಾರಿಗೆ ಇಲಾಖೆಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಹಾಗು ಸಾರಿಗೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ನಂತರ ಸಾರಿಗೆ ನೌಕರರ ಮುಷ್ಕರದ ವಿಚಾರ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಆರನೇ ವೇತನ ಆಯೋಗ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಏಪ್ರಿಲ್ 7 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಈಗಾಗಲೇ ಬಹುತೇಕ ಬೇಡಿಕೆ ಈಡೇರಿಸಲಾಗಿದೆ, ಲಾಕ್ ಡೌನ್ ಸಮಯದಲ್ಲಿಯೂ ವೇತನ ಪಾವತಿ ಮಾಡಲಾಗಿದೆ. ಆದರೆ ಆರನೇ ವೇತನ ಆಯೋಗ ಜಾರಿ ಕಷ್ಟ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದ್ದು, ಇದನ್ನೇ ಸಿಎಂ ಮುಂದೆಯೂ ಹೇಳಲಿದ್ದಾರೆ ಎನ್ನಲಾಗ್ತಿದೆ.
ಓದಿ : ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ ಅಂತೇನೂ ಇಲ್ಲ: ಸತೀಶ್ ಜಾರಕಿಹೊಳಿ
ಒಂದು ವೇಳೆ ಸರ್ಕಾರದ ಮನವಿಗೆ ಸ್ಪಂದಿಸದೇ ಸಾರಿಗೆ ನೌಕರರು ಮುಷ್ಕರ ನಡೆಸಿದಲ್ಲಿ ಪರ್ಯಾಯ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ತೆಲಂಗಾಣದಲ್ಲಿ ಮುಷ್ಕರನಿರತ ಎಲ್ಲಾ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇಲ್ಲಿಯೂ ಅಂತಹ ಕ್ರಮಕ್ಕೆ ಮುಂದಾಗುವ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಿಎಂ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.