ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ ಸಂಭವಿಸಿರುವ ಬೆಳೆಹಾನಿ ನಷ್ಟದ ವರದಿಯನ್ನು ಒಂದು ವಾರದಲ್ಲಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ನೆರೆಪೀಡಿತ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಿಎಂ, ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾದ ಬೆಳೆ ನಷ್ಟದ ವರದಿ ಕೊಡುವಂತೆ ಸೂಚನೆ ನೀಡಿದರು. ಜೊತೆಗೆ, ವರದಿ ಸಲ್ಲಿಕೆ ನಂತರವೇ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಮಳೆಯಿಂದ ಮನೆಗಳ ಗೋಡೆ ಬಿದ್ದರೆ, ಹೊಸದಾಗಿ ಮನೆ ಮಾಡಿಕೊಡಬೇಕು. ಮಣ್ಣಿನ ಮನೆಗಳ ಒಂದು ಗೋಡೆ ಬಿದ್ದರೆ ಮತ್ತೆ ಅದೇ ಮನೆ ಕಟ್ಟಿಕೊಡದೇ ಸಿಮೆಂಟಿನ ಮನೆ ಮರು ನಿರ್ಮಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನಿರಾಶ್ರಿತರ ಕೇಂದ್ರಗಳಲ್ಲಿ ಅಗತ್ಯ ನೆರವು ಒದಗಿಸಿ. ಅಲ್ಲಿರುವವರಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ನೀಡುತ್ತಾ ಕೋವಿಡ್ -19 ಹರಡದಂತೆಯೂ ಎಚ್ಚರಿಕೆ ವಹಿಸಬೇಕು. ಮಳೆಯಿಂದ ಕೊರೊನಾ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ಮಳೆ ಪೀಡಿತ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಿ. ಇದಕ್ಕಾಗಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.