ಬೆಂಗಳೂರು : ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ, ಸ್ಥಿತಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರದ ಭಾಗವನ್ನಷ್ಟೇ ನೋಡುವರು. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಡಿಸಿಗಳು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿಟ್ಟು ಕಾರ್ಯ ನಿರ್ವಹಿಸಬೇಕೆಂದರು.
ನೀವು ಆಡಳಿತದ ಭಾಗವಾಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ನೀಡಲಾಗಿದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯ ಎಂದರು. ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ, 101 ಕಾರಣಗಳು ದೊರೆಯುತ್ತವೆ. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತ ನೀಡಬೇಕು. ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಿರಿ ಎಂದು ತಿಳಿಸಿದರು.
ಇಂದಿನ ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮುಕ್ತವಾಗಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಆಗ ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶವಾಗಿದೆ. ತಳಹಂತದಲ್ಲಿ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸುವಂತೆ ಸೂಚಿಸಿದರು.
ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ವಿ. ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ವಿ.ಸೋಮಣ್ಣ, ಬಿ.ಶ್ರೀರಾಮುಲು, ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.