ಬೆಂಗಳೂರು: ನೆರೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಜ್ಯದಲ್ಲಿಯೂ ಹೆಚ್ಚಿನ ಮಳೆ ಸುರಿಯಲು ಆರಂಭಿಸಿದೆ. ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ರಾಜ್ಯದ ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ತುರ್ತು ಸ್ಥಿತಿಯನ್ನು ಎದರಿಸಲು ಸಜ್ಜಾಗಿರಬೇಕು. ನೆರೆ, ಪ್ರವಾಹದಂತಹ ಸಂದರ್ಭ ಎದುರಾದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಲು, ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಳ್ಳಲು ಸನ್ನದ್ಧರಾಗಿರುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.