ಬೆಂಗಳೂರು: ಸಿಎಂ ಯಡಿಯೂರಪ್ಪ ಮುಂಬರುವ ಮಾರ್ಚ್ ನಲ್ಲಿ ತಮ್ಮ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಆದರೆ, ತೆರಿಗೆ ಸಂಗ್ರಹದ ಕ್ಷೀಣ ಪ್ರಗತಿಯೇ ಸಿಎಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಿಎಂ ಯಡಿಯೂರಪ್ಪ ಆರ್ಥಿಕ ಹಿಂಜರಿಕೆ ಮಧ್ಯೆ ಮಾರ್ಚ್ ನಲ್ಲಿ ತಮ್ಮ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಮುಂದಾಗಿದ್ದು, ಈಗಾಗಲೇ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ರೈತಪರ, ಜನಪರ ಬಜೆಟ್ ಮಂಡನೆ ಯಡಿಯೂರಪ್ಪರಿಗೆ ಅನಿವಾರ್ಯವಾಗಿದೆ. ಆದರೆ, ಬಜೆಟ್ ಹಿಂದಿನ ಸಂಪನ್ಮೂಲ ಕ್ರೋಢೀಕರಣ ಸರ್ಕಾರಕ್ಕೆ ಸಂಕಟವಾಗಿ ಪರಿಣಮಿಸಿದೆ. ಸಂಪನ್ಮೂಲ ಕ್ರೂಢೀಕರಣದ ಪ್ರಮುಖ ಮೂಲವಾದ ತೆರಿಗೆ ಸಂಗ್ರಹದಲ್ಲೇ ಹಿನ್ನಡೆಯಾಗುತ್ತಿರುವುದು ಸಿಎಂರ ಸಂಕಷ್ಟವನ್ನು ಹೆಚ್ಚಿಸಿದೆ.
ಬಿಎಸ್ ವೈ ಸಿಎಂ ಅವಧಿಯ ತೆರಿಗೆ ಸಂಗ್ರಹದ ವಿವಿರ:
- ಆಗಸ್ಟ್ ನಿಂದ ಡಿಸೆಂಬರ್ ವರೆಗಿನ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಈ ವರೆಗೆ ಸಂಗ್ರಹವಾದ ತೆರಿಗೆ ಮೊತ್ತ 53,431 ಕೋಟಿ ರೂ.
- ವಾಣಿಜ್ಯ ತೆರಿಗೆ- 37,182 ಕೋಟಿ ರೂ.
- ಅಬಕಾರಿ ತೆರಿಗೆ- 8,740 ಕೋಟಿ ರೂ.
- ಮೋಟಾರು ವಾಹನ- 2,875 ಕೋಟಿ ರೂ.
- ಮುದ್ರಾಂಕ/ನೋಂದಣಿ- 4,634 ಕೋಟಿ ರೂ.
ತೆರಿಗೆ ಸಂಗ್ರಹದ ಮಾಸಿಕ ಏರಿಳಿತ:
- ವಾಣಿಜ್ಯ ತೆರಿಗೆ: ಸೆಪ್ಟೆಂಬರ್ನಲ್ಲಿ 8.07 ಶೇ. ಪ್ರಗತಿ ಕಂಡಿದ್ದ ವಾಣಿಜ್ಯ ತೆರಿಗೆ ಅಕ್ಟೋಬರ್ ನಲ್ಲಿ 7.45ಶೇ. ಗೆ ಇಳಿಕೆ ಕಂಡಿತ್ತು. ಅದೇ ನವಂಬರ್ ನಲ್ಲಿ 8.3ಶೇ.ಕ್ಕೆ ಅಲ್ಪ ಏರಿಕೆ ಕಂಡಿತು. ಆದರೆ ಡಿಸೆಂಬರ್ ತಿಂಗಳಲ್ಲಿ ಮತ್ತೆ 7.19ಶೇ.ಕ್ಕೆ ಇಳಿಕೆ ಕಂಡಿದೆ.
- ಅಬಕಾರಿ: ಸೆಪ್ಟೆಂಬರ್ ನಲ್ಲಿ 8.35 ಶೇ. ಪ್ರಗತಿ ಕಂಡಿದ್ದ ಅಬಕಾರಿ ತೆರಿಗೆ ಸಂಗ್ರಹ ಅಕ್ಟೋಬರ್ ನಲ್ಲೂ 8.35ಶೇ.ರಷ್ಟಿತ್ತು. ಅದೇ ನವಂಬರ್ ನಲ್ಲಿ 8.40ಶೇ.ಕ್ಕೆ ಏರಿಕೆ ಕಂಡಿತು. ಡಿಸೆಂಬರ್ ತಿಂಗಳಲ್ಲಿ 8.54ಶೇ.ಗೆ ಮುನ್ನಡೆ ಕಂಡಿದೆ.
- ಮೋಟಾರು ವಾಹನ ತೆರಿಗೆ: ಸೆಪ್ಟೆಂಬರ್ ನಲ್ಲಿ 7.81 ಶೇ. ಪ್ರಗತಿ ಕಂಡಿದ್ದ ಮೋಟಾರು ವಾಹನ ತೆರಿಗೆ ಸಂಗ್ರಹ ಅಕ್ಟೋಬರ್ ನಲ್ಲಿ 6.7ಶೇ.ಗೆ ಕುಸಿದಿತ್ತು. ಅದೇ ನವಂಬರ್ ನಲ್ಲಿ 12.05ಶೇ.ಗೆ ಉತ್ತಮ ಪ್ರಗತಿ ಕಂಡಿತು. ಆದರೆ, ಡಿಸೆಂಬರ್ ತಿಂಗಳಲ್ಲಿ 7.56ಶೇ.ಗೆ ಮತ್ತೆ ಕುಸಿತ ಕಂಡಿದೆ. ಇದರಿಂದ ಸುಮಾರು 400 ಕೋಟಿ ರೂ. ಕೊರತೆ ಕಾಣಲಿದೆ.
- ಮುದ್ರಾಂಕ/ನೋಂದಣಿ ತೆರಿಗೆ: ಸೆಪ್ಟೆಂಬರ್ ನಲ್ಲಿ 7.50 ಶೇ. ಪ್ರಗತಿ ಕಂಡಿದ್ದ ಮುದ್ರಾಂಕ, ನೋಂದಣಿ ತೆರಿಗೆ ಸಂಗ್ರಹ ಅಕ್ಟೋಬರ್ ನಲ್ಲಿ 7.29ಶೇ.ಗೆ ಕುಸಿದಿದೆ. ನವೆಂಬರ್ ನಲ್ಲಿ 7.87ಶೇ.ಗೆ ಅಲ್ಪ ಪ್ರಗತಿ ಕಂಡಿತು. ಡಿಸೆಂಬರ್ ತಿಂಗಳಲ್ಲಿ 8.64ಶೇ.ಗೆ ಏರಿಕೆ ಕಂಡಿದೆ.
1,17,044 ಕೋಟಿಯ ಗುರಿ ಮುಟ್ಟುವುದೇ ಕಷ್ಟ:
ಸಿಎಂ ಯಡಿಯೂರಪ್ಪ ಎಲ್ಲ ತೆರಿಗೆ ಸಂಗ್ರಹ ಇಲಾಖೆಗಳಿಂದ 1,17,044 ಕೋಟಿ ರೂ. ಸಂಗ್ರಹದ ಗುರಿ ಮುಟ್ಟೇ ಮುಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ತೆರಿಗೆ ಸಂಗ್ರಹದ ಪ್ರಗತಿ ನೋಡಿದರೆ ಈ ಗುರಿ ಮುಟ್ಟುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅಧಿಕಾರ ವಹಿಸಿದಾಗಿನಿಂದ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಆರ್ಥಿಕ ಹಿಂಜರಿಕೆ.
ಆಗಸ್ಟ್ ನಿಂದ ಡಿಸೆಂಬರ್‌ವರೆಗಿನ ವಿವಿಧ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಏರುಗತಿ ಕಾಣುತ್ತಿಲ್ಲ. ಈ ತೆರಿಗೆ ಸಂಗ್ರಹದಲ್ಲಿನ ಹಿನ್ನಡೆ ಸಿಎಂ ಯಡಿಯೂರಪ್ಪ ರನ್ನು ಕಂಗೆಡಿಸಿದೆ. ಅದಕ್ಕಾಗಿಯೇ ತೆರಿಗೆ ಸಂಗ್ರಹ ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಪದೇ ಪದೆ ಪ್ರಗತಿ ಪರಿಶೀಲನೆ ನಡೆಸಿ, ತೆರಿಗೆ ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವಂತೆ ತಾಕೀತು ಮಾಡುತ್ತಿದ್ದಾರೆ. ಆದರೆ ವಾಸ್ತವ ಸ್ಥಿತಿ ನೋಡಿದರೆ, ಮಾರ್ಚ್ ಐದರ ಬಜೆಟ್ ಮಂಡನೆ ವೇಳೆಗೆ ನಿರೀಕ್ಷಿತ ಗುರಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ.