ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆಯೇ ಹೊರತು, ನನ್ನ ಸ್ಥಾನದ ವಿಚಾರ ಅಲ್ಲ ಎಂದು ನಾಯಕತ್ವ ಬದಲಾವಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಮಂಗಳೂರಿಗೆ ತೆರಳುವ ಮುನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಪದೇಪದೆ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ದೆಹಲಿಯಿಂದ ಮಾಹಿತಿ ಇದೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುತ್ತಾರೆ ಅದು ಇದು ಅಂತಾ ಹೇಳುತ್ತಿದ್ದಾರೆ.
ನಾನು ಸಿದ್ದರಾಮಯ್ಯ ಅವರಿಗೆ ಹೇಳಲು ಇಚ್ಚಿಸುತ್ತೇನೆ, ಶಿರಾದಲ್ಲಿ ನೂರಕ್ಕೆ ನೂರು ನಿಮ್ಮ ನಾಯಕತ್ವದಲ್ಲಿ ಸೋಲುತ್ತೀರಿ. ರಾಜರಾಜೇಶ್ವರಿ ನಗರದಲ್ಲೂ ಸೋಲುತ್ತೀರಿ, ಪ್ರತಿಪಕ್ಷ ನಾಯಕರ ಸ್ಥಾನ ಬದಲಾವಣೆ ಬಗ್ಗೆ ದೆಹಲಿಯ ನಾಯಕರು ಯೋಚನೆ ಮಾಡುತ್ತಿದ್ದಾರೆಯೇ ಹೊರತು ಯಡಿಯೂರಪ್ಪ ಬಗ್ಗೆ ಅಲ್ಲ ಎಂದರು.
ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ಕೊಡಬಾರದು ಅಂತಾ ಇಷ್ಟು ದಿನ ಸುಮ್ಮನೆ ಇದ್ದೆ. ಆದರೆ, ಅವರ ಹೇಳಿಕೆಗಳು ದಿನೇದಿನೆ ಜಾಸ್ತಿಯಾಗುತ್ತಿರುವ ಕಾರಣ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಫಲಿತಾಂಶ ಬಂದ ಮೇಲೆ ಯಾರ ಬಂಡವಾಳ ಏನು ಅಂತಾ ಅವರಿಗೇ ಗೊತ್ತಾಗುತ್ತದೆ. 10ನೇ ತಾರೀಖಿನವರೆಗೆ ಕಾಯಲಿ ಅಂತಾ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುತ್ತೇನೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗುವ ಬಗ್ಗೆ ಇನ್ನೂ ಏನೂ ನಿಶ್ಚಯ ಮಾಡಿಲ್ಲ, ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆ ಮಾತಾಡುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಫೋನ್ ಮಾಡಿದ್ದರು, ಮಾತನಾಡುವ ಅಗತ್ಯ ಇದ್ದರೆ ಮಾತ್ರ ಹೋಗುತ್ತೇನೆ ಎಂದರು.