ಬೆಂಗಳೂರು: ರೈತರಿಗೆ ಅನ್ಯಾಯವಾಗುವ ಕೆಲಸವನ್ನು ಮಾಡಲು ನನ್ನಿಂದ ಸಾಧ್ಯವೇ ಇಲ್ಲ. ಅಧ್ಯಯನ ನಡೆಸಿಯೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಬಗ್ಗೆ ಚರ್ಚೆಗೆ ನಾವು ಮುಕ್ತವಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ಬೆಳಗ್ಗಿನ ಕಲಾಪದಲ್ಲಿ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತ ರೂಪದಲ್ಲಿರುವ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಸೆಕ್ಷನ್ 79 ಎ ಮತ್ತು ಬಿ ನಿರ್ಬಂಧ ದೇಶದ ಅನೇಕ ರಾಜ್ಯಗಳಲ್ಲಿ ಇಲ್ಲ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು,ಕೇರಳ, ಆಂಧ್ರದಲ್ಲೂ ನಿರ್ಬಂಧ ಇಲ್ಲ. ಅಲ್ಲದೇ ನೀರಾವರಿ ಜಮೀನು ಖರೀದಿಸಿದಲ್ಲಿ ನೀರಾವರಿಯನ್ನೇ ಮಾಡಬೇಕು. ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ರೈತರಿಗೆ ಅನ್ಯಾಯವಾಗುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಎಲ್ಲವನ್ನೂ ಅಧ್ಯಯನ ಮಾಡಿಯೇ ತರಲಾಗಿದೆ. ರೈತರು ಈಗ ಮೊದಲಿನಂತೆ ಇಲ್ಲ, ಬುದ್ದಿವಂತರಿದ್ದಾರೆ. ಕೇಳಿದ ಕೂಡಲೇ ಎಲ್ಲರೂ ಜಮೀನು ಮಾರಾಟ ಮಾಡಲ್ಲ ಎಂದರು.
ಶೇ. 2 ರಷ್ಟು ಭೂಮಿಯೂ ಕೈಗಾರಿಕೆಗೆ ಸಿಕ್ಕಲ್ಲ. ಕೈಗಾರಿಕಾ ಕ್ಷೇತ್ರವೂ ಬೆಳೆಯಬೇಕಲ್ಲವೇ?, ನೀವು ಕೂಡ ಎಲ್ಲ ಸದಸ್ಯರು ಇತರ ರಾಜ್ಯಗಳ ಕಾನೂನು ಬಗ್ಗೆ ಅಧ್ಯಯನ ಮಾಡಿ, ಚರ್ಚೆಗೆ ನಾವೂ ಸಿದ್ದರಿದ್ದೇವೆ ಎಂದರು.
ಓದಿ: ಕೆ ಆರ್ ಪುರದಲ್ಲಿ ಗೋಣಿಚೀಲ ಹೊದ್ದುಕೊಂಡು ರೈತರಿಂದ ವಿಭಿನ್ನ ಪ್ರತಿಭಟನೆ
ಇದಕ್ಕೂ ಮೊದಲು ಮಾತನಾಡಿದ ಹಿರಿಯ ಸದಸ್ಯ ಬಸವರಾಜ್, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡನೀಯ. ಇದು ರೈತರಿಗೆ ಮಾರಕ ವಿಧೇಯಕವಾಗಿದೆ. ಶೇ.70 ರಷ್ಟು ರೈತರಿರುವ ಕಡೆ ಕೃಷಿ ಕಾಯ್ದೆ ತರುವಾಗ ಸಾಕಷ್ಟು ಆಲೋಚನೆ ಮಾಡಬೇಕು.ಕಾರ್ಪೊರೇಟ್ ಸಂಸ್ಥೆಯವರು ಬಂದು ಠಿಕಾಣಿ ಹೂಡಿದರೆ ಏನು ಮಾಡಬೇಕು?, ಜಮೀನನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಎಂದು ಅವಕಾಶ ನೀಡಿದರೆ ಎಲ್ಲರೂ ಖರೀದಿಗೆ ಬರಲಿದ್ದಾರೆ. ಆಗ ಎಲ್ಲರೂ ಹೊಲ ಗದ್ದೆ ಮಾರಾಟ ಮಾಡುತ್ತಾರೆ ಅಷ್ಟೇ. ರೈತರು ದುಡಿದಿದ್ದರಿಂದಲೇ ನಾವು ವರ್ಷಗಟ್ಟಲೇ ಲಾಕ್ಡೌನ್ನಲ್ಲಿ ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಊಟ ಮಾಡಿದ್ದೇವೆ. ಅವರು ಕೆಲಸ ಬಿಟ್ಟಿದ್ದರೆ ನಾವು ಊಟ ಮಾಡಲು ಸಾಧ್ಯವಿತ್ತೆ? ಇಂತಹ ರೈತರನ್ನು ಭೂ ಸುಧಾರಣಾ ಕಾಯ್ದೆ ಮೂಲಕ ಒಕ್ಕಲೆಬ್ಬಿಸಬಾರದು ಎಂದು ಮನವಿ ಮಾಡಿದರು.
ಸಣ್ಣ ರೈತರಿಗೆ ಸಬ್ಸಿಡಿ, ಇನ್ ಪುಟ್ ಸಬ್ಸಿಡಿ, ಉಚಿತ ಟಿಲ್ಲರ್ ಇತ್ಯಾದಿ ಕೊಟ್ಟು ಕೃಷಿಕರನ್ನು ಕೃಷಿಯಲ್ಲೇ ಉಳಿಸಬೇಕು. ಇಲ್ಲದೇ ಇದ್ದಲ್ಲಿ ಭವಿಷ್ಯದಲ್ಲಿ ಕಂಪನಿಗಳು ಬಂದು ದೇಶದ ಭತ್ತ ಖರೀದಿಸಿ ದುಬಾರಿ ಬೆಲೆಗೆ ಅಕ್ಕಿ ಮಾರಾಟ ಮಾಡುತ್ತಾರೆ. ಯಾವುದೇ ಬಿಲ್ ತನ್ನಿ ಆದರೆ ಕನಿಷ್ಟ ಬೆಂಬಲ ಅಡಿ ಖರೀದಿ ಕೇಂದ್ರ ತೆರೆಯಿರಿ. ವೈಜ್ಞಾನಿಕ ದರ ನಿಗದಿ ಮಾಡಿ, ಖರೀದಿ ಮತ್ತು ಮಾರಾಟಕ್ಕೆ ಸರ್ಕಾರವೇ ದರ ನಿಗದಿಪಡಿಸಬೇಕು. ಇಲ್ಲದೇ ಇದ್ದಲ್ಲಿ ಬರೀ ಮಧ್ಯವರ್ತಿಗಳಿಗೆ ಲಾಭವಾಗುತ್ತದೆ. ದೊಡ್ಡ ಕಂಪನಿಗಳಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇರುತ್ತದೆ. ಅವರು ತಮ್ಮ ಗೋಡೌನ್ನಲ್ಲಿ ಬೆಳೆ ಇರಿಸಿಕೊಳ್ತಾರೆ. ಕೃತಕ ಅಭಾವ ಸೃಷ್ಟಿಸಿರುತ್ತಾರೆ. ದರ ಹೆಚ್ಚಾದಾಗ ಮಾರುಕಟ್ಟೆಗೆ ಬಿಡುತ್ತಾರೆ ಆಗ ಏನು ಮಾಡುತ್ತೀರಿ? ಅಭಾವ ಸೃಷ್ಟಿಯಾದಾಗ ನಾವು ಅವರನ್ನು ಸಂಪರ್ಕ ಮಾಡುವ ಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಓದಿ: 'ಹಿಂದೆ ತಾವೇ ಬೆಂಬಲಿಸಿದ್ದ ಕೃಷಿ ಸುಧಾರಣೆಗಳಿಗೆ ಈಗ ಪ್ರತಿಪಕ್ಷಗಳ ವಿರೋಧ'
ಭೂ ಸುಧಾರಣೆ ಕುರಿತು ಅರಸು ತಂದಿದ್ದ ಬಿಲ್ ಉತ್ತಮವಾಗಿತ್ತು. ಭೂ ರಹಿತರಿಗೆ ಭೂಮಿ ಕೊಡುವ ಕಾನೂನು ಮಾಡಿದ್ದರು. ಸಾಮಾಜಿಕ ನ್ಯಾಯ ಕಾಪಾಡುವ ಭಾವನೆಯಿಂದ ಬಿಲ್ ತರಲಾಗಿತ್ತು. ಆದರೆ ಇದಕ್ಕೆ ಈಗ ವ್ಯತಿರಿಕ್ತವಾಗಿ ಕಾನೂನು ರಚಿಸಲಾಗುತ್ತದೆ. ಸೊಸೈಟಿ ಮಾಡಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ. ಒಳ್ಳೆ ದರ ಬಂದರೆ ಅವರಿಗೆಲ್ಲಾ ಭೂಮಿ ಮಾರಾಟ ಮಾಡಿ ಬಿಡುತ್ತಾರೆ. ನಂತರ ಅಲ್ಲಿ ಕೃಷಿ ಬದಲು ನಾಗರೀಕರಣ ಆಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು.
'ನಮ್ ಕಡೆ ಹೆಣ್ಮಕ್ಕಳ ಸೀರೆ ತೂತು ಬಿದ್ದಿದೆ'
ನಮ್ ಕಡೆ ಹೆಣ್ಮಕ್ಕಳ ಸೀರೆ ತೂತು ಬಿದ್ದಿವೆ. ಮಕ್ಕಳಿಗೆ ಅಂಡರ್ ವೇರ್ ಇಲ್ಲದ ಸ್ಥಿತಿ ನಮ್ಮ ಕಡೆ ರೈತರಿಗೆ ಇದೆ ಎಂದು ಮಧ್ಯವರ್ತಿಗಳ ಹಾವಳಿ ಬಗ್ಗೆ ಪ್ರಸ್ತಾಪ ಮಾಡಿದರು. ಟೊಮ್ಯಾಟೊ ರಸ್ತೆಗೆ ಎಸೆಯುವ ಅನಿವಾರ್ಯತೆ ಎದುರಾಗಿದೆ ಎಂದಾಗ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ, ಸುರಿಯುವುದು ಬೇರೆ ಸುರಿಸುವುದು ಬೇರೆ ಎಂದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ನಡೆದು ಗದ್ದಲ ವಾತಾವರಣ ಸೃಷ್ಟಿಯಾದಾಗ ಮಧ್ಯಪ್ರವೇಶ ಮಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಈ ಬಿಲ್79 ಎ.ಬಿ ಬಗ್ಗೆ ಇದೆ ಅದನ್ನು ಮಾತ್ರ ಮಾತಾಡಿ, ಎಪಿಎಂಸಿ ಬಗ್ಗೆ ಯಾಕೆ ಎಂದು ಕಿಡಿಕಾರಿದರು.
'ಟಾಟಾ ಬಿರ್ಲಾದವರು ಖರೀದಿ ಮಾಡಲ್ಲ'
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಕೃಷಿ ಕ್ಷೇತ್ರದ ಉನ್ನತೀಕರಣಕ್ಕೆ ಮಾಡಲಾಗುತ್ತಿದೆ.ಇಲ್ಲಿ ಟಾಟಾ ಬಿರ್ಲಾ ಬಂದು ಸಾವಿರಾರು ಎಕರೆ ಭೂಮಿ ಪಡೆಯಲು ಸಾಧ್ಯವಿಲ್ಲ. 5 ಸದಸ್ಯರ ಕುಟುಂಬಕ್ಕೆ 54 ಎಕರೆ ಮಾತ್ರ ಸೀಮಿತ. ಅದೂ ಕೂಡ ನೀರಾವರಿ ಇದ್ದರೆ ನೀರಾವರಿಗೆ ಬಳಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಸಿಎಂ ಇಬ್ರಾಹಿಂ ಮಾತನಾಡಿ, ಕೇಂದ್ರ ರೈತರ ಜೊತೆ ಮಾತುಕತೆಗೆ ಮುಂದಾಗಿದೆ. ಅದು ಆಗುವವರೆಗೂ ಕಾಯಬಹುದಲ್ಲ, ಯಾಕೆ ತರಾತುರಿ? ಕಾದು ನೋಡಿ ಎಂದು ಒತ್ತಾಯಿಸಿದರು.