ಬೆಂಗಳೂರು: ಕೂಡಲೇ ಆಹಾರ ಸಚಿವ ಉಮೇಶ್ ಕತ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಬಿಜೆಪಿ ಸಂಸ್ಕೃತಿ. ಸರ್ಕಾರದ ಯಾವ ಸಚಿವರು ಇದರ ಬಗ್ಗೆ ಮಾತಾಡಿ ಎಂದು ಹೇಳುವುದಿಲ್ಲ. ಸಚಿವರ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು ಎಂದರು.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು. ಬಿಜೆಪಿ ನಾಯಕರು ಉತ್ತರ ಕೊಡಬೇಕು. ರೈತರು ಅಧಿಕಾರದಲ್ಲಿ ಇದ್ದವರಿಗೆ ಕೇಳ್ತಾರೆ. ಅಧಿಕಾರ ಇರೋರ ಬಳಿ ಜನ ಕೇಳ್ತಾರೆ. ಅಕ್ಕಿ ಕೊಡಿ ಎಂದು ಕೇಳಿದ್ರೆ, ಸತ್ರೆ ಸಾಯಿ ಎಂದು ಹೇಳಿದ್ರೆ, ಯಾಕೆ ಇವರು ಸಚಿವರಾಗಿ ಇರಬೇಕು. ಕೂಡಲೇ ಸಿಎಂ ರಾಜೀನಾಮೆ ತೆಗೆದುಕೊಳ್ಳಬೇಕು. ಜನರ ಬಳಿ ಕ್ಷಮೆ ಕೇಳುವುದಕ್ಕೂ ಮೊದಲು ರಾಜೀನಾಮೆ ಪಡೆಯಲಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ಕತ್ತಿ ಅವರ ಅಣಕು ಶವಯಾತ್ರೆ ಮಾಡ್ತೀವಿ. ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ. ಅವರ ಅಣಕು ಶವಯಾತ್ರೆ ಮಾಡಿ ಗಮನ ಸೆಳೆಯುತ್ತೇವೆ. ಏಳು ಕೆಜಿ ಅಕ್ಕಿಯನ್ನು ನಮ್ಮ ಸರ್ಕಾರದಲ್ಲಿ ಕೊಡುತ್ತಿದ್ವಿ. ಅದನ್ನು ಕಡಿತ ಮಾಡಿದ್ದಾರೆ. ಕೂಡಲೇ ಕತ್ತಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು. ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಂಪುಟದಿಂದ ಕೈಬಿಡಬೇಕು. ನಾವು ಕ್ಷಮೆ ಕೇಳಿ ಎಂದು ಹೇಳಲ್ಲ. ಇಂದಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ ಎಂದರು.
ಸಂಜೆಯೊಳಗೆ ಜವಾಬ್ದಾರಿಯಿಂದ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಇದು ಉಢಾಪೆ ಅಲ್ಲ, ಇದು ಜವಾಬ್ದಾರಿ. ಹಿಂದೆ ಸಣ್ಣ ಪುಟ್ಟ ವಿಚಾರಗಳಿಗೆ ರಾಜೀನಾಮೆ ನೀಡಿರುವ ಅನೇಕ ಉದಾಹರಣೆಗಳಿವೆ. ಯಡಿಯೂರಪ್ಪ ಅವರೇ ನಿಮಗೆ ನಿಮ್ಮ ಜೀವನದ ಕೊನೆಯ ರಾಜಕಾರಣದಲ್ಲಿ ಒಳ್ಳೆಯ ಫೇರ್ವೆಲ್ ತಗೋಬೇಕಾದ್ರೆ ರಾಜಕಾರಣದ ಕೊನೆಯಲ್ಲಿ ಜನರ ಪರವಾಗಿ ನಿಂತೆ ಎಂದು ತೋರಿಸಬೇಕು. ಸಚಿವ ಕತ್ತಿಯನ್ನು ತೆಗೆದು ನೀವು ಸಾಕ್ಷಿ ಆಗಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಓದಿ: ಸರ್ಕಾರದ ಆಡಳಿತದಲ್ಲಿ ಭದ್ರತೆ ಇಲ್ಲ, ಅಯೋಗ್ಯ ಪರಿಸ್ಥಿತಿ ಬಂದಿದೆ: ಹೆಚ್.ವಿಶ್ವನಾಥ್