ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಚಿತ್ರಣದ ಕುರಿತು ಅಭ್ಯರ್ಥಿ ಆರ್.ಅಶೋಕ್ ಅವರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದು, ಪಕ್ಷಕ್ಕೆ ನೆಲೆ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚಿಸಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಕನಕಪುರ ಬಿಜೆಪಿ ಅಭ್ಯರ್ಥಿಯಾಗಿರುವ ಕಂದಾಯ ಸಚಿವ ಆರ್.ಅಶೋಕ್ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಸಮಾರಂಭದ ನಂತರ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಕನಕಪುರ ಅಖಾಡದ ಚಿತ್ರಣ ಪಡೆದುಕೊಂಡರು. ಕನಕಪುರದಲ್ಲಿ ವರಿಷ್ಠರ ಪ್ರಚಾರ ಕಾರ್ಯದ ಕುರಿತು ಮಾತುಕತೆ ನಡೆಸಲಾಯಿತು. ಇನ್ನುಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ತಂತ್ರದ ನಡುವೆ ಕ್ಷೇತ್ರ ಗೆಲ್ಲಲು ಏನೆಲ್ಲ ಪ್ರತಿ ತಂತ್ರ ರೂಪಿಸಬೇಕೆಂದು ಮಾತುಕತೆ ನಡೆಸಲಾಯಿತು.
ಕನಕಪುರ ಕ್ಷೇತ್ರದಲ್ಲಿ ಮೇ 4 ರಂದು ಅಮಿತ್ ಶಾ ಪ್ರಚಾರ ಕಾರ್ಯ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಅಮಿತ್ ಶಾ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ನಾಳೆ ಕನಕಪುರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರವಾಸ ಕೈಗೊಳ್ಳುತ್ತಿದ್ದು ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರ ಜತೆ ತಂತ್ರಗಾರಿಕೆ ಕುರಿತು ಸಭೆ ನಡೆಸಲಿದ್ದಾರೆ. ಈ ವಿಚಾರವಾಗಿಯೂ ಸಿಎಂ ಚರ್ಚಿಸಿದ್ದಾರೆ.
ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಮೇ 4 ರಂದು ಅಮಿತ್ ಶಾ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದು, ಮೇ 7 ರಂದು ಸಿಎಂ ಬೊಮ್ಮಾಯಿ ಪ್ರಚಾರ ನಡೆಸುವರು. ಈ ಎಲ್ಲ ವಿಚಾರಗಳ ಕುರಿತು ಅಭ್ಯರ್ಥಿ ಅಶೋಕ್ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಮ್ಮದು 224 ಕ್ಷೇತ್ರಗಳ ಜನಾಭಿಪ್ರಾಯದ ಪ್ರಜಾ ಪ್ರಣಾಳಿಕೆ: ಸಿಎಂ ಬೊಮ್ಮಾಯಿ
ಕನಕಪುರ ಬಂಡೆ ಸೋಲಿಸಲು ರಣತಂತ್ರ: ಕನಕಪುರ ವಿಧಾನಸಭಾ ಮತಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆ. ದಶಕಗಳಿಂದ ವಿರೋಧಿಗಳಿಲ್ಲದೇ ಪಾರುಪತ್ಯ ಸಾಧಿಸಿದ್ದ ಡಿಕೆಶಿಗೆ ಟಕ್ಕರ್ ಕೊಡಲು ಬಿಜೆಪಿಯಿಂದ ಸಚಿವ ಅಶೋಕ್ ಕಣದಲ್ಲಿದ್ದಾರೆ. ಹಾಗೆಯೇ ಸ್ಥಳೀಯ ಜೆಡಿಎಸ್ ಅಭ್ಯರ್ಥಿಯಾದ ನಾಗರಾಜ್ ಸಂಪ್ರದಾಯಿಕ ಮತಗಳನ್ನು ಸೆಳೆದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಈ ಬಾರಿ ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರು ಅಂದುಕೊಂಡಷ್ಟು ಗೆಲುವು ಸುಲಭವಲ್ಲ ಎನ್ನಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಡಿಕೆಶಿ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದರಿಂದ ಅವರೇ ಬಲಿಷ್ಠ ಹುರಿಯಾಳಾಗಿದ್ದರು. ಅವರಿಗೆ ತೀವ್ರ ಪೈಪೋಟಿ ನೀಡಲು ಜೆಡಿಎಸ್ ಮತ್ತು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿವೆ. ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಲಿಷ್ಠ ಒಕ್ಕಲಿಗ ನಾಯಕ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಡಿಕೆಶಿಯನ್ನು ಸೋಲಿಸಲು ಬಿಜೆಪಿ ರಣವ್ಯೂಹ ಹೆಣೆದಿದೆ.