ಮಹದೇವಪುರ (ಬೆಂಗಳೂರು): ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ನಿರ್ಮಾಣ ಮಾಡಿರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಸರ್ಕಾರವನ್ನು ಕಾಗಿನೆಲೆ ಶ್ರೀ ಟೀಕಿಸಿದ್ದು, ಸಿಎಂ ಕೊಂಚ ಅಸಮಾಧಾನಗೊಂಡ ಪ್ರಸಂಗ ನಡೆಯಿತು.
ಕಾಗಿನೆಲೆ ಶ್ರೀ ಹೇಳಿದ್ದೇನು?: ವೇದಿಕೆಯಲ್ಲಿ ಮಾತನಾಡುತ್ತಿದ್ದ ಕಾಗಿನೆಲೆ ಶ್ರೀಗಳು, "ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿಗಳು ನೀವಾಗಬಾರದು. ಬೆಂಗಳೂರು ನಗರದಲ್ಲಿ ಮಳೆ ಬಂದ ಸಂದರ್ಭದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಇದ್ಯಾವುದೂ ಅಧಿಕಾರಿಗಳಿಗೆ ಮನವರಿಕೆ ಆಗುತ್ತಿಲ್ಲ. ಜನಪ್ರತಿನಿಧಿಗಳು, ಬಿಬಿಎಂಪಿಯವರು ಆ ಸಮಯಕ್ಕೆ ಬರೀ ಆಶ್ವಾಸನೆ ನೀಡಿ ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರವೇ ಇಲ್ಲ" ಎಂದು ಟೀಕಿಸುತ್ತಿದ್ದರು. ಶ್ರೀಗಳ ಪಕ್ಕದಲ್ಲೇ ಕುಳಿತಿದ್ದ ಸಿಎಂ ಬೊಮ್ಮಾಯಿ, ಈ ಹೇಳಿಕೆಯಿಂದ ಅಸಮಾಧಾನಗೊಂಡು ಸ್ವಾಮೀಜಿ ಕೈಯಿಂದ ಮೈಕ್ ತೆಗೆದುಕೊಂಡು ಸ್ಪಷ್ಟನೆ ನೀಡಿದರು.
"ನಾನು ಯಾವುದೇ ಟೊಳ್ಳು ಭರವಸೆ ನೀಡಿಲ್ಲ. ಈಗಾಗಲೇ ನಮ್ಮ ಯೋಜನೆಯಂತೆ ಕೆಲಸ ಪ್ರಾರಂಭವಾಗಿದೆ. ಒತ್ತುವರಿ ತೆರವು ಮಾಡುವ ಮೂಲಕ ಆದಷ್ಟು ಬೇಗ ರಾಜಕಾಲುವೆಗಳ ಕೆಲಸ ಪೂರ್ಣ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲಾ ಅನುದಾನವನ್ನು ಸರ್ಕಾರದಿಂದಲೇ ಕೊಡಲಾಗಿದೆ. ನಾನು ಸುಳ್ಳು ಭರವಸೆ ನೀಡುವ ಮುಖ್ಯಮಂತ್ರಿಯಲ್ಲ. ಯಾವುದಾದರೂ ಕೆಲಸ ಮಾಡ್ತೀನಿ ಅಂದ್ರೆ ಮಾಡೇ ಮಾಡ್ತೀನಿ. ಆಗದಿದ್ರೆ ಆಗಲ್ಲ ಅಂತಾನೇ ಹೇಳ್ತೀನಿ. ನನಗೆ ಯಾರ ಭಯವೂ ಇಲ್ಲ" ಎಂದು ಖಡಕ್ ಪ್ರತ್ಯುತ್ತರ ಕೊಟ್ಟರು. ಬಳಿಕ ಶ್ರೀಗಳು ಮಾತನಾಡಿ, ಸಿಎಂ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: 17ನೇ ವಯಸ್ಸಿನಿಂದಲೇ ತಮಟೆ ವಾದನ: ಚಿಕ್ಕಬಳ್ಳಾಪುರದ ಸಾಧಕನಿಗೆ ಒಲಿಯಿತು ಪದ್ಮಶ್ರೀ
ಇನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು, "ನಾವೆಲ್ಲ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು. ನಮಗೆ ಸ್ವಾತಂತ್ರ್ಯದ ಮಹತ್ವ ಎಷ್ಟು ಇದೆಯೋ ಗೊತ್ತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದವರಿಗೆ ಅದರ ಗಾಂಭಿರ್ಯತೆ ಗೊತ್ತಿತ್ತು. ನಮ್ಮ ದೇಶದ ಇತಿಹಾಸ, ಪರಂಪರೆ ತಿಳಿದುಕೊಂಡಾಗ ನಾವು ಯಾರು ಎಂದು ತಿಳಿಯುತ್ತದೆ. ಈ ದೇಶಕ್ಕಾಗಿ ಹಾಗೂ ಸ್ವಂತಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವುದನ್ನು ತಿಳಿಯಬೇಕು. ಯಾಕೆಂದರೆ ಪ್ರತಿಯೊಬ್ಬರ ಸ್ವಂತ ಸಾಧನೆ ದೇಶದ ಸಾಧನೆಗೆ ಜೋಡಣೆ ಆಗುತ್ತದೆ" ಎಂದು ಹೇಳಿದರು.
"ಕಾರ್ಯಕ್ರಮದಲ್ಲಿ ನಾವು ದೇಶಭಕ್ತಿ ಹಾಡನ್ನು ಕೇಳಿದೆವು. ಅದನ್ನು ಕೇಳಿದಾಗಲೆಲ್ಲ ನಮ್ಮಲ್ಲಿ ದೇಶದ ಬಗ್ಗೆ ಅಭಿಮಾನ ಉಕ್ಕುತ್ತದೆ. ಅದು ಸದಾಕಾಲ ನಮ್ಮಲ್ಲಿ ಜೀವಂತವಾಗಿರಬೇಕು. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವು ತಿಳಿದುಕೊಂಡು ದೇಶ ಕಟ್ಟುವುದರಲ್ಲಿ ನಮ್ಮ ಪಾಲು ಇರಬೇಕು. ನಾವು ದೇಶಕ್ಕಾಗಿ ಪ್ರಾಣ ಕೊಡುವ ಅಗತ್ಯವಿಲ್ಲ. ದೇಶಕ್ಕಾಗಿ ಬದುಕಬೇಕಿದೆ. ನಮ್ಮ ಪ್ರಧಾನಿಗಳು ದೇಶದ ಮುಂದಿನ 25 ವರ್ಷವನ್ನು ಅಮೃತ ಕಾಲ ಅಂತಲೇ ಕರೆದಿದ್ದಾರೆ. ಇಡೀ ವಿಶ್ವದಲ್ಲಿ ಭಾರತಕ್ಕೆ ಮಹತ್ವದ ಕಾಲ ಬಂದಿದೆ. ನಾವು ಎಲ್ಲ ಕ್ಷೇತ್ರದಲ್ಲೂ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೇಶಕ್ಕೆ ನಮ್ಮ ಕೊಡುಗೆ ಏನು ಎನ್ನುವ ಚಿಂತನೆ ಮಾಡೋಣ" ಎಂದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರಜಾಧ್ವನಿ ಯಾತ್ರೆ: ಮೋದಿ, ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ