ಬೆಂಗಳೂರು: ಮುಂದಿನ ದಿನಗಳಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನೇಕಾರರ ಉತ್ಪನ್ನಗಳ ಮಾರುಕಟ್ಟೆಯನ್ನು ಡಿಜಿಟಲ್ ವೇದಿಕೆಗೂ ವಿಸ್ತರಿಸಿ ಪ್ರಮುಖ ಆನ್ಲೈನ್ ವ್ಯಾಪಾರಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹತ್ತಿಯ ಸಂಸ್ಕರಣೆಯಿಂದ, ವಸ್ತ್ರ ತಯಾರಿಕೆ, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲ ಹಂತಗಳ ಸೌಲಭ್ಯಗಳನ್ನು ಒಳಗೊಂಡ ಮಿನಿ ಟೆಕ್ಸ್ಟೈಲ್ಸ್ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೇಕಾರರೊಂದಿಗೆ ವೈಯಕ್ತಿಕವಾಗಿ ಹೆಚ್ಚಿನ ಒಡನಾಟವನ್ನು ತಾವು ಹೊಂದಿದ್ದು, ಅವರ ಸಂಕಷ್ಟಗಳನ್ನು ಸಹ ಹತ್ತಿರದಿಂದ ಕಂಡಿದ್ದೇನೆ. ನೇಕಾರರು ತಮ್ಮ ಉತ್ಪನ್ನಗಳ ಗುಣಮಟ್ಟ ವೃದ್ಧಿಸುವ ಮೂಲಕ ರಫ್ತು ಮಾಡಲು ಸಹ ಮುಂದಾಗಬೇಕು. ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದ್ದು, ಅಮೇಜಾನ್, ಫ್ಲಿಪ್ಕಾರ್ಟ್ ಮತ್ತಿತರ ಆನ್ಲೈನ್ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ವಿದ್ಯುತ್ ಮಗ್ಗ ನೇಕಾರರಿಗೆ ಸಂಕ್ರಾಂತಿ ಕೊಡುಗೆ: ಈವರೆಗೆ ಕೈಮಗ್ಗ ನೇಕಾರರಿಗೆ ಮಾತ್ರ ನೆರವು ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ವಿದ್ಯುತ್ ಮಗ್ಗದ ನೇಕಾರರು ಹಾಗೂ ಕಾರ್ಮಿಕರು ಸಹ ಸಂಕಷ್ಟದಲ್ಲಿರುವುದನ್ನು ಅರಿತು ಸರ್ಕಾರವು ಸಂಕ್ರಾಂತಿಯ ಕೊಡುಗೆಯಾಗಿ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರು ಹಾಗೂ ವಿದ್ಯುತ್ ಮಗ್ಗ ನೇಕಾರರಿಗೂ ಈ ಸೌಲಭ್ಯ ವಿಸ್ತರಿಸಿದೆ ಎಂದರು.
ಗಾಂಧಿ, ಹೆಗಡೆ, ಬಿಎಸ್ವೈ ಸ್ಮರಣೆ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದರಲ್ಲೂ ಸ್ವದೇಶಿ ಆಂದೋಲನದಲ್ಲಿ ನೇಕಾರರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ವಿದೇಶಿ ಉಡುಪುಗಳನ್ನು ತೊರೆದು, ಸ್ವದೇಶಿ ಬಳಕೆ ಮಾಡುವಂತೆ ಗಾಂಧೀಜಿ ಅವರು ನೀಡಿದ ಕರೆಗೆ ಸ್ಪಂದಿಸಿದ ನೇಕಾರರು ಹಗಲು ರಾತ್ರಿ ಶ್ರಮಿಸಿ, ಇಡೀ ದೇಶದ ಜನರಿಗೆ ಬಟ್ಟೆ ಒದಗಿಸಿದರು.
ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿದರು: ಆ ಮೂಲಕ ಸ್ವದೇಶಿ ಆಂದೋಲನ ಯಶಸ್ವಿಗೊಳಿಸಿದ್ದಲ್ಲದೇ, ದೇಶ ಸ್ವಾತಂತ್ರ್ಯ ಕಂಡುಕೊಳ್ಳಲು ನೆರವಾದರು. ನಂತರದ ದಿನಗಳಲ್ಲಿ ಸಂಕಷ್ಟದಲ್ಲಿದ್ದ ನೇಕಾರರ ನೆರವಿಗೆ ರಾಮಕೃಷ್ಣ ಹೆಗಡೆ ಸರ್ಕಾರ ಧಾವಿಸಿತು. ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಬಡವರಿಗೆ ಸೀರೆ, ಧೋತರ ಹಂಚುವ ಮೂಲಕ ಬಡವರಿಗೆ ವಸ್ತ್ರ ನೀಡುವ ಹಾಗೂ ನೇಕಾರರಿಗೆ ಅನುಕೂಲ ಕಲ್ಪಿಸಲು ಈ ಯೋಜನೆಗಳು ಸಹಕಾರಿಯಾದವು. ನಂತರ ಬಿ. ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿದರು.
ನೇಕಾರರಿಗೆ ಹೆಚ್ಚಿನ ಬೆಂಬಲ ನೀಡಲಾಗಿದೆ: ಕೋವಿಡ್ 19 ರ ಸಂದರ್ಭದಲ್ಲಿ ನೇಕಾರ ಸಮ್ಮಾನ್ ಯೋಜನೆ, ನೇಕಾರರ ಸಾಲ ಮನ್ನಾ ಮೊದಲಾದ ಕ್ರಮಗಳ ಮೂಲಕ ನೇಕಾರರ ನೆರವಿಗೆ ಧಾವಿಸಿದರು. ಪ್ರಸಕ್ತ ನಮ್ಮ ಸರ್ಕಾರ ನೇಕಾರರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಹಲವಾರು ಪೂರಕ ಕ್ರಮಗಳನ್ನು ಕೈಗೊಂಡಿದೆ. ನೇಕಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳ ಶಾಸಕರು ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನೇಕಾರರಿಗೆ ಹೆಚ್ಚಿನ ಬೆಂಬಲ ನೀಡಲಾಗಿದೆ ಎಂದರು.
ನೇಕಾರರ ಮಕ್ಕಳು ಆರ್ಥಿಕ ಸಂಕಷ್ಟದ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿ, ನೇಕಾರಿಕೆಯಲ್ಲಿ ತೊಡಗುವುದನ್ನು ತಮ್ಮ ವಿದ್ಯಾರ್ಥಿ ದೆಸೆಯಿಂದ ನೋಡುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿಯೇ ರೈತ ವಿದ್ಯಾನಿಧಿಯನ್ನು ನೇಕಾರರಿಗೆ ವಿಸ್ತರಿಸಲು ನಿರ್ಧರಿಸಲಾಯಿತು. ಇದಲ್ಲದೆ, ವೃತ್ತಿಪರ ನೇಕಾರ ಸಮುದಾಯಕ್ಕೆ ತಮ್ಮ ಘಟಕದ ವಿಸ್ತರಣೆಗೆ ನೀಡಲಾಗುತ್ತಿದ್ದ ಶೇಕಡಾ 30ರ ಸಹಾಯಧನವನ್ನು ಶೇಕಡಾ 50 ಕ್ಕೆ ಹೆಚ್ಚಿಸಲಾಗಿದೆ.
ನೇಕಾರರ ಸಂಕಷ್ಟಗಳಿಗೆ ಸರ್ಕಾರ ಸದಾ ಸ್ಪಂದಿಸಿದೆ.. ನೇಕಾರರ ಕಾಲೋನಿಗಳಲ್ಲಿ ವಾಸಿಸುವವರಿಗೆ ರಹವಾಸಿ ಪತ್ರಗಳನ್ನು ನೀಡಲು ತೀರ್ಮಾನಿಸಲಾಗಿದೆ. ನೇಕಾರರಿಗೆ 2 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. ತಮಿಳುನಾಡು ಮಾದರಿಯಲ್ಲಿ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ 5 ಎಚ್.ಪಿ ವರೆಗೆ ಉಚಿತ ವಿದ್ಯುತ್ ಹಾಗೂ ಫಿಕ್ಸೆಡ್ ಚಾರ್ಜಸ್ ನಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡಲಾಗುತ್ತಿದೆ. ನೇಕಾರರ ಸಂಕಷ್ಟಗಳಿಗೆ ಸರ್ಕಾರ ಸದಾ ಸ್ಪಂದಿಸಿದೆ ಎಂದು ಸಿಎಂ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ನೇಕಾರರೊಂದಿಗೆ ಸಂವಾದ ನಡೆಸಿದರು. ಜವಳಿ ಹಾಗೂ ಸಕ್ಕರೆ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ, ಎಂ.ಡಿ ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷ ಗೌಡ, ಕಾವೇರಿ ಹ್ಯಾಂಡ್ಲೂಮ್ಸ್ ಅಧ್ಯಕ್ಷ ಬಿ. ಜೆ ಗಣೇಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಟಿ. ಹೆಚ್ ಎಂ ಕುಮಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಓದಿ: ಚೇತರಿಕೆ ಕಾಣದ ನೇಕಾರಿಕೆ ಉದ್ಯಮ: ಸಾಲದ ಸುಳಿಯಲ್ಲಿ ಸಿಲುಕಿದ ನೇಕಾರರು