ಬೆಂಗಳೂರು: "ಕೋವಿಡ್, ಪ್ರವಾಹದಂತಹ ಸವಾಲುಗಳ ನಡುವೆಯೂ ಕರ್ನಾಟಕ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ 15 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಸಂಗ್ರಹಿಸಿರುವುದು ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ, "ತೆರಿಗೆ ದಕ್ಷತೆ, ತೆರಿಗೆ ವಂಚಕರನ್ನು ಪತ್ತೆ ಮಾಡುವುದರ ಜೊತೆಗೆ ಎಲ್ಲ ಬಾಬ್ತುಗಳಿಂದ ಬರಬೇಕಾದ ತೆರಿಗೆ ಸಂಗ್ರಹಕ್ಕೆ ವಿಶೇಷ ಗಮನ ಹರಿಸಿದ್ದರಿಂದ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ" ಎಂದರು.
ರಾಜ್ಯಪಾಲರ ಭಾಷಣದಲ್ಲಿ ತಿಳಿಸಿರುವ ಸಂಗತಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, "ರಾಜ್ಯಪಾಲರು ಸತ್ಯ ಮತ್ತು ವಾಸ್ತವಾಂಶದ ಆಧಾರದ ಮೇಲೆ ಭಾಷಣ ಮಾಡಿದ್ದಾರೆ. ರಾಜಕಾರಣ ಇದರಲ್ಲಿ ಇಲ್ಲ" ಎಂದು ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು. "ಕಳೆದ ಐದು ವರ್ಷಗಳಲ್ಲಿ ಎರಡು ಸರ್ಕಾರಗಳು ಆಡಳಿತ ನಡೆಸಿದವು. ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲಾಯಿತು. ಆರ್ಥಿಕ ಹಿಂಜರಿತ, ಆರೋಗ್ಯದ ಸವಾಲು, ಎರಡು ಬಾರಿ ಪ್ರವಾಹ ಹೀಗೆ, ಒಂದು ರೀತಿಯ ಸವಾಲುಗಳ ಮಧ್ಯೆ ನಾನು ಮುಖ್ಯಮಂತ್ರಿಯಾದೆ" ಎಂದರು.
'ಕೋವಿಡ್ ಪರಿಸ್ಥಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ..': "ಆರ್ಥಿಕ ಮತ್ತು ಸಾಮಾಜಿಕ ಚಕ್ರ ನಿರಂತರವಾಗಿ ತಿರುಗುತ್ತಿರಬೇಕು. ಇದು ನಿಂತರೆ ಮರು ಆರಂಭಕ್ಕೆ ಬಹಳ ಯತ್ನ ಮಾಡಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತಮ್ಮ ಸರ್ಕಾರ ಕೋವಿಡ್‍ನಿಂದಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಆಮ್ಲಜನಕದ ಆಕ್ಸಿಜನ್ ಬೇರೆ ಬೇರೆ ರಾಜ್ಯಗಳಲ್ಲಿ ಸಿಗಲು ಬಹಳ ಕಷ್ಟವಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಕ್ಸಿಜನ್ ತಯಾರಕರನ್ನು ಕರೆಸಿ ಉತ್ಪಾದನೆ ಹೆಚ್ಚಿಸಿದರು. ಕರ್ನಾಟಕಕ್ಕೆ ಗರಿಷ್ಟ ಮಿತಿಯಲ್ಲಿ ಆಕ್ಸಿಜನ್ ಕೊಟ್ಟೆವು. ಆರೋಗ್ಯ ಸಿಬ್ಬಂದಿ, ಪೊಲೀಸ್ ಸೇರಿದಂತೆ ಎಲ್ಲರೂ ತ್ವರಿತವಾಗಿ ಕೆಲಸ ಮಾಡಿದರು" ಎಂದು ಪ್ರಶಂಸಿದ ಅವರು ಧನ್ಯವಾದ ತಿಳಿಸಿದರು.
"ಲಸಿಕಾಕರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಹೀಗಾಗಿ ನಾಲ್ಕನೇ ಅಲೆಯಿಂದ ನಮ್ಮ ದೇಶಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ನಮ್ಮ ವಿಜ್ಞಾನಿಗಳ ಸಾಧನೆಯ ಮೇಲೆ ನಂಬಿಕೆ ಇಟ್ಟು ಮೋದಿ ಹುರಿದುಂಬಿಸಿದ್ದು ಶ್ರೇಯಸ್ಸಿನ ಕೆಲಸ. ಜಿಎಸ್‍ಟಿ ಪರಿಹಾರ ಧನವಾಗಿ ಹದಿನೆಂಟು ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ. ರೈತ ಶಕ್ತಿ ಯೋಜನೆಯಿಂದ 53 ಲಕ್ಷ ರೈತರಿಗೆ 383 ಕೋಟಿ ರೂ. ವಿವಿಧ ರೂಪದ ಪರಿಹಾರ ಒದಗಿಸಲಾಗಿದೆ. ಕಳೆದ ವರ್ಷ 20 ಸಾವಿರ ರೈತರಿಗೆ ಸಾಲ ನೀಡಿದ್ದೇವೆ. ಮಾರ್ಚ್ ಅಂತ್ಯದ ಒಳಗೆ 30 ಸಾವಿರ ರೈತರಿಗೆ ಸಾಲ ವಿತರಣೆ ಮಾಡುವ ಗುರಿ ಇದೆ" ಎಂದರು.
"ಯಶಸ್ವಿನಿ ಯೋಜನೆಗೆ 300 ಕೋಟಿ ಮೀಸಲಿಟ್ಟು, ರೈತರಿಗಾಗಿ ಈ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ಆಹಾರ ಉತ್ಪಾದನಾ ಘಟಕಗಳಿಗೆ ಉತ್ತೇಜಿಸಲು ಸರಿಯಾದ ಮಾರುಕಟ್ಟೆ ಕಲ್ಪಿಸಲಾಗಿದೆ. ರೈತರಿಗೋಸ್ಕರ, ರೈತರಿಂದ ದೊಡ್ಡ ಪ್ರಮಾಣದ ಮಾರುಕಟ್ಟೆ ಈ ವಲಯದಲ್ಲಿ ಸೃಜನೆಯಾಗಿದ್ದು, ಸರ್ಕಾರದ ಪ್ರೋತ್ಸಾಹದಿಂದ ಇದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ" ಎಂದು ಅಂಕಿ - ಅಂಶ ಸಹಿತ ವಿವರಿಸಿದರು.
ಇದನ್ನೂ ಓದಿ: 'ಅಡುಗೆ ಮನೆ, ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಅಭ್ಯರ್ಥಿ ಡಿಸೈಡ್ ಮಾಡೋ ಪಕ್ಷ ನಮ್ಮದಲ್ಲ'
"5 ಲಕ್ಷ ಮೆಟ್ರಿಕ್ ಟನ್‍ಗಿಂತ ಹೆಚ್ಚು ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ. ಎಂಎಸ್‍ಪಿ ದರವನ್ನು ಕೇಂದ್ರ ಹೆಚ್ಚಿಸಿದ್ದರಿಂದ ಎಲ್ಲ ರೈತರ ರಾಗಿಯನ್ನು ಖರೀದಿಸಿ ರೈತರ ಬೆಂಬಲಕ್ಕೆ ನಿಲ್ಲಲಾಯಿತು. ತೊಗರಿ ಬೆಳೆಗೆ ರೋಗ ಬಂದಿದ್ದರಿಂದ ಹೆಕ್ಟೇರ್ಗೆ ಹತ್ತು ಸಾವಿರ ರೂಪಾಯಿ ನೀಡಲಾಗಿದೆ. ಜೋಳ, ಕುಚ್ಚಲಕ್ಕಿ ಮೊದಲಾದವುಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಶಾಲಾ ಕೊಠಡಿಗಳೇ ಆಗುತ್ತಿರಲಿಲ್ಲ. ಜೊತೆಗೆ ಮಳೆಯಿಂದ ಕಟ್ಟಡಗಳು ಶಿಥಿಲವಾಗಿದ್ದವು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 8 ಸಾವಿರ ಶಾಲಾ ಕೊಠಡಿಗಳನ್ನು ಕಟ್ಟಿದ್ದೇವೆ. ಈಗಾಗಲೇ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ವಿವೇಕ ಯೋಜನೆಯಡಿ ಇವುಗಳ ಕಾಮಗಾರಿ ಶುರುವಾಗಿದೆ. ಇದಕ್ಕಾಗಿ 1900 ಕೋಟಿ ರೂ. ಅನುದಾನ ಒದಗಿಸಲಾಗಿದೆ" ಎಂದರು.
15 ಸಾವಿರ ಶಿಕ್ಷಕರ ನೇಮಕ: "ಶಿಕ್ಷಕರ ನೇಮಕಾತಿಯೂ ಬಹಳ ವರ್ಷಗಳಿಂದ ಆಗಿರಲಿಲ್ಲ. ನಾವು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಎಲ್ಲರಿಗೂ ನೇಮಕಾತಿ ಆದೇಶ ಶೀಘ್ರದಲ್ಲೇ ದೊರೆಯಲಿದೆ. ಮುಂದಿನ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ಎಲ್ಲ ಪಠ್ಯಗಳನ್ನು ಕನ್ನಡದಲ್ಲಿ ಅನುದಾನ ಮಾಡುವುದಕ್ಕಾಗಿ ಬಜೆಟ್‍ನಲ್ಲಿ ಪ್ರತ್ಯೇಕ ಹಣವನ್ನು ಕಾದಿರಿಸಲಾಗಿದೆ" ಎಂದು ಹೇಳಿದರು.
"ಡಿಜಿಟಲೀಕರಣದ ಮೂಲಕ ಹೊಸತನದ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಹಿಂದಿನಂತೆ ದೊಡ್ಡ ಕ್ಯಾಂಪಸ್‍ನ ವಿಶ್ವವಿದ್ಯಾಲಯಗಳು ಈಗ ಅನಗತ್ಯ. ಆದ್ದರಿಂದ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹೊಸ ವಿಶ್ವವಿದ್ಯಾಲಯಗಳಿವೆ. ಕರ್ನಾಟಕದ ಏಳು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಉನ್ನತೀಕರಣ ಮಾಡಲಾಗುತ್ತಿದೆ. ಇವಕ್ಕೆ ಕೆಐಟಿ ಎಂಬ ಹೆಸರಿಡಲಾಗಿದೆ. 50 ಕೋಟಿ ರೂ. ಪ್ರಾರಂಭಿಕ ಅನುದಾನವನ್ನು ಇದಕ್ಕಾಗಿ ನೀಡಲಾಗಿದೆ. ಹೆಣ್ಣುಮಕ್ಕಳು ಹೆಚ್ಚು ಓದುತ್ತಿದ್ದಾರೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಓದುತ್ತಿರುವುದು ಕಂಡು ಬರುತ್ತಿದೆ. ಇದು ಸಕಾರಾತ್ಮಕ ಅಂಶವಾಗಿದೆ" ಎಂದರು.
25 ಲಕ್ಷ ಮನೆಗಳಿಗೆ ನಲ್ಲಿ ವ್ಯವಸ್ಥೆ : "ಜಲ ಜೀವನ ಮಿಷನ್ ಯೋಜನೆಯಡಿ ಮುಂದಿನ ವರ್ಷ ರಾಜ್ಯದ 25 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ಅನುಮೋದಿಸಲಾಗಿದೆ. ನಲ್ಲಿ ಮೂಲಕ ಮನೆಗಳಿಗೆ ನೀರು ಒದಗಿಸಲುವ ಯೋಜನೆಗೆ ಬಜೆಟ್ ಅನುದಾನ ಒದಗಿಸಲಾಗಿದೆ. ಉತ್ತಮ ನೀರು ಕೊಟ್ಟಾಗ ಜನರ ಸ್ವಾಸ್ಥ್ಯವೂ ಹೆಚ್ಚುತ್ತದೆ" ಎಂದು ಹೇಳಿದರು.
"ಹಿಂದುಳಿದ ವರ್ಗದ ಎರಡೂವರೆ ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದಿದ್ದಾರೆ. ಹೆಚ್ಚುವರಿ 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು 250 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ವಿದ್ಯಾಸಿರಿ ಸೌಲಭ್ಯ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ರಾಜ್ಯದ 5 ಕಡೆ ಮೆಗಾ ಹಾಸ್ಟೆಲ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ತಲಾ ಒಂದು ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯಲಿದೆ. ಇದು ಹೊಸ ಪರಿಕಲ್ಪನೆಯಾಗಿದ್ದು, ಇನ್ನಷ್ಟು ಮೆಗಾ ಹಾಸ್ಟೆಲ್ ನಿರ್ಮಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರನ್ನು ಮುಖ್ಯವಾಹಿನಿಗೆ ತರಲು ಹಲವು ಕಾರ್ಯಕ್ರಮಗಳಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು" ಎಂದು ತಿಳಿಸಿದರು.
ಇದನ್ನೂ ಓದಿ: ಭಗವಾನ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ