ಬೆಂಗಳೂರು : ಆರ್ಟ್ ಆಫ್ ಲಿವಿಂಗ್ ನಮ್ಮ ಬದುಕಿನ ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಅಧ್ಯಾತ್ಮಿಕ ಕೇಂದ್ರ. ಜೀವನದ ಅರ್ಥವನ್ನು ಸರಳ ರೀತಿಯಲ್ಲಿ ಕಂಡುಕೊಳ್ಳುವ ವಿಧಾನ ಮತ್ತು ಪದ್ಧತಿಗಳನ್ನು ತಿಳಿಯಲು ಈ ಕೇಂದ್ರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸೆಂಟರ್ನಲ್ಲಿ ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರವಿಶಂಕರ್ ಗುರೂಜಿ ಅವರನ್ನ ಭೇಟಿಯಾಗುವುದು ನನ್ನ ಪಾಲಿಗೆ ಅಮೃತ ಘಳಿಗೆ. ಜಗತ್ತಿನಲ್ಲಿ ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಮಾನವನಿಗೆ ಒಗ್ಗಿಕೊಳ್ಳುವಿಕೆಯ ಮಹತ್ವದ ಗುಣವನ್ನು ಹೊಂದಿದ್ದಾನೆ.
ಯಾವುದೇ ಭೌಗೋಳಿಕ ಪರಿಸ್ಥಿತಿಯಲ್ಲಿಯೂ ಮನುಷ್ಯ ಜೀವಿಸಬಲ್ಲ. ಗುಣಮಟ್ಟದ ಜೀವನ ನಡೆಸಲು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಬರಬೇಕು. ಕೆಲವೇ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ ಯುಗ ಪುರುಷರಾಗುತ್ತಾರೆ. ಅವರಲ್ಲಿ ಗುರು ರವಿಶಂಕರ್ ಗುರೂಜಿ ಸಹ ಒಬ್ಬರು ಎಂದರು.
ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ: ನಮ್ಮ ಸನಾತನ ಧರ್ಮಕ್ಕೆ 5 ಸಾವಿರಗಳ ಇತಿಹಾಸವಿದೆ. ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ. ಸುಲಭ ರೀತಿಯಲ್ಲಿ ಜೀವನದ ಸಾಕ್ಷಾತ್ಕಾರ ಪಡೆಯಲು ಹಾಗೂ ಜೀವನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಲು ಈ ಕೇಂದ್ರಕ್ಕೆ ಬರಲೇಬೇಕು. ವಿಶ್ವದ ಸುಮಾರು 140 ದೇಶದ ಜನರ ಸಮಾಗಮವನ್ನ ಈ ಅಧ್ಯಾತ್ಮಿಕ ಕೇಂದ್ರದಲ್ಲಿ ಕಾಣಬಹುದಾಗಿದೆ ಎಂದರು.
ಇದನ್ನೂ ಓದಿ: ಚೆನ್ನಮ್ಮನ ವೀರತ್ವವನ್ನು ಸಮಾಜದ ಅಭಿವೃದ್ಧಿಯಲ್ಲಿ ಮಾಡಿ ತೋರಿಸಬೇಕಿದೆ : ಬೊಮ್ಮಾಯಿ
ನಾಗರಿಕತೆ ಮತ್ತು ಸಂಸ್ಕೃತಿ ನಡುವೆ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿರುವುದು ನಾಗರಿಕತೆ, ನಾವೇನಾಗಿದ್ದೇನೆ ಎನ್ನುವುದು ಸಂಸ್ಕೃತಿ. ನಾವೇನಾಗಿದ್ದೇವೆ ಎಂದು ಅರಿಯಲು ಆರ್ಟ್ ಆಫ್ ಲಿವಿಂಗ್ಗೆ ಬರಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ, ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು: ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ಅಧ್ಯಾತ್ಮಿಕತೆ ವಿಜ್ಞಾನಕ್ಕೆ ಪ್ರೇರಣೆ ನೀಡಿದರೆ, ವಿಜ್ಞಾನ ಅಧ್ಯಾತ್ಮಿಕತೆಯನ್ನು ನಿರೂಪಿಸುತ್ತದೆ. ವಿಜ್ಞಾನ ಮತ್ತು ಆತ್ಮಜ್ಞಾನವನ್ನು ಅರಿತುಕೊಳ್ಳುವುದು ಒಂದು ಕಲೆ. ಈ ಕಲೆಯ ಕುರಿತು ಜನರಿಗೆ ಸುಲಭವಾಗಿ ಅರಿವು ಮೂಡಿಸಲು ಈ ಕೇಂದ್ರಕ್ಕೆ ಆರ್ಟ್ ಆಫ್ ಲಿವಿಂಗ್ ಎಂದು ಹೆಸರಿಟ್ಟಿರಬಹುದು.
ಜೀವನದ ಸರ್ವಕಾಲಿಕ ಸತ್ಯಗಳ ಜ್ಞಾನವನ್ನು ಪಡೆಯಬಹುದು. ಈ ಸರ್ವಕಾಲಿಕ, ವಿಶ್ವವ್ಯಾಪಿ ಸತ್ಯಗಳಿಗೆ ಯಾವುದೇ ಭಾಷೆ, ದೇಶದ ಬೇಧವಿಲ್ಲ. ವಿಶ್ವವ್ಯಾಪಿಯಾಗಿ ಭಕ್ತರು ಈ ಸತ್ಯವನ್ನು ಅರಿಯಬಹುದಾಗಿದೆ. ಭಕ್ತಿ ಎಂದರೆ ಕರಾರುರಹಿತ ಪ್ರೀತಿ. ಗುರುವಿನಲ್ಲಿ ಭಕ್ತಿಯಿಂದ ಲೀನವಾಗುವುದರಿಂದ ಜೀವನದ ಅರ್ಥಗಳನ್ನು ತಿಳಿಯಬಹುದು.
ಇದನ್ನೂ ಓದಿ: ಕನ್ನಡ ನಾಡನ್ನು ಸಮೃದ್ದಿಯ ನಾಡನ್ನಾಗಿಸಲು ‘ಪ್ರಗತಿ ಪ್ರತಿಮೆ’ ಪ್ರೇರಣೆ: ಬೊಮ್ಮಾಯಿ
ಹಣಕಾಸಿನ ಆರ್ಥಿಕತೆಯಲ್ಲಿ ಪಾಪ ಪುಣ್ಯವನ್ನು ಹಾಗೂ ಅಧ್ಯಾತ್ಮದಲ್ಲಿ ಲಾಭ ನಷ್ಟವನ್ನು ನೋಡುತ್ತೇನೆ. ಇಡೀ ಜಗತ್ತಿನಾದ್ಯಂತ ಬದುಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೀವನೋತ್ಸಾಹವಿರುವ ಕೇಂದ್ರದಿಂದ ಇಡೀ ವಿಶ್ವಕ್ಕೆ ಒಳಿತಾಗುತ್ತಿದೆ. ಶ್ರೀಗುರುಗಳು, ಜೀವನದ ಕತ್ತಲನ್ನು ಸರಿಸಿ ಬೆಳಕನ್ನು ತರುವ ಕೆಲಸವನ್ನು ದಿನನಿತ್ಯ ಮಾಡುತ್ತಿದ್ದಾರೆ ಎಂದರು.