ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭಗೊಂಡಿದ್ದು, ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರದ ಸಮರ್ಥನೆಗೆ ಶಾಸಕರು ನಿಲ್ಲುವಂತೆ ಸೂಚಿಸಲು ನಾಳೆ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ನಾಳೆ ವಿಧಾನಸಭೆ ಅಧಿವೇಶನ ಮುಗಿದ ನಂತರ ಸಂಜೆ ಆರು ಗಂಟೆಗೆ ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಮಳೆ ಅನಾಹುತ ನಿರ್ವಹಣೆ ಕುರಿತು ಪ್ರತಿಪಕ್ಷಗಳಿಂದ ಎದುರಾಗಲಿರುವ ಟೀಕೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ, ಶಾಸಕ ದಡೇಸುಗೂರು ವಿವಾದಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತದೆ.
ಕಾಂಗ್ರೆಸ್ ಮಾಡುವ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರದ ವೇಳೆ ನಡೆದಿರುವ ಆರೋಪಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಚಿಂತನೆ ನಡೆಸಿದ್ದು, ನಾಳಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುತ್ತದೆ.