ಬೆಂಗಳೂರು: ಅಧಿಕಾರಕ್ಕೆ ಬಂದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಕುರಿತು ಬಿಎಸ್ವೈ ನಿವಾಸದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ, ಸಭೆಯ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಯಿತು. ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದಾರೆ, ಇದನ್ನು ಹೇಗೆ ಕೌಂಟರ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಲಿಂಗಾಯತ ಸಿಎಂ ಬಗ್ಗೆಯೂ ಕೆಲವರು ಸಲಹೆ ಕೊಟ್ಟರು. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಭಾಗಿಯಾಗಿದ್ದರು. ಅವರು ಹೈಕಮಾಂಡ್ಗೆ ಸಭೆಯ ಭಾವನೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನದ್ದು ಲಿಂಗಾಯತ ವಿರೋಧಿ ನಡೆ. ಅವರಿಗೆ 1967 ರಿಂದ ಈವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತ ಸಿಎಂ ಮಾಡಕ್ಕಾಗಲಿಲ್ಲ. ಈ ನಡುವೆ ವಿರೇಂದ್ರ ಪಾಟೀಲರಿಗೆ ಒಂಬತ್ತು ತಿಂಗಳು ಅಧಿಕಾರ ಕೊಟ್ಟು ನಂತರ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಏರ್ಪೋರ್ಟ್ನಲ್ಲೇ ಅವರನ್ನು ತೆಗೆದು ಹಾಕಿದರು. ರಾಜಶೇಖರ ಮೂರ್ತಿ ಅವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ. ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಹೋಗಿತ್ತು. ಮತ ಬ್ಯಾಂಕ್ಗಾಗಿ ಧರ್ಮ ಒಡೆಯಲು ಹೋಗಿದ್ದರು. ಜನ ಇದನ್ನೆಲ್ಲ ಮರೆಯಲ್ಲ, ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪ್ರಚಾರ ಮಿಲಿಟರಿ ಹೋಟೆಲ್ನಿಂದಲೇ ಆರಂಭವಾಗಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನ ಇರ್ತಾರೆ ಅಂತಲೇ ಡಿಕೆಶಿ ಅವರನ್ನು ಭೇಟಿ ಮಾಡಲ್ಲ. ಅಂತಹ ಸಾಮಾನ್ಯ ಜನರನ್ನು ಭೇಟಿ ಮಾಡೋದಕ್ಕೆ ಅಶೋಕ್ ಮಿಲಿಟರಿ ಹೋಟೆಲ್ಗೆ ಹೋಗಿದ್ದಾರೆ. ಇದರಲ್ಲಿ ಏನ್ ತಪ್ಪಿದೆ? ಯಾಕೆ ಮಿಲಿಟರಿ ಹೋಟೆಲ್ಗೆ ಹೋಗಬಾರದು? ಎಂದು ಅಶೋಕ್ ಕನಕಪುರದಲ್ಲಿ ಮಿಲಿಟರಿ ಹೋಟೆಲ್ಗೆ ಬಂದು ಹೋಗಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಟಕ್ಕರ್ ನೀಡಿದರು.
ವಲಸೆ ಹೋದವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡುತ್ತಿದ್ದೇವೆ. ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು. ವರುಣಾದಲ್ಲಿ ಬಿಜೆಪಿ ಜೆಡಿಎಸ್ ಒಳಮೈತ್ರಿ ಎಂಬ ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಎಲ್ಲ ಅಭ್ಯರ್ಥಿಗಳೂ ತಾವೇ ಗೆಲ್ಲಬೇಕು ಅಂತ ಚುನಾವಣೆಯಲ್ಲಿ ನಿಲ್ಲೋದು, ಸಿದ್ದರಾಮಯ್ಯಗೆ ಭಯ ಹುಟ್ಟಿಕೊಂಡಿದೆ. ಒಳ ಮೈತ್ರಿನಾ, ಹೊರ ಮೈತ್ರಿನಾ ಅಂತ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಲ್ಲಿ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ. ಅವರಿಗೆ ಭಯ ಬಂದಿದೆ, ಅವರಿಬ್ಬರೂ ಸೇರಿಕೊಂಡಿದ್ದಾರೆ ಅನ್ನೋ ಭಯ ಬಂದಿದೆ. ಯಾರ್ಯಾರು ಸೇರಿಕೊಂಡರೂ ಸಿದ್ದರಾಮಯ್ಯಗೆ ಸ್ವಂತ ಬಲ ಇದ್ದರೆ ಗೆಲ್ಲುತ್ತಾರೆ, ಇಲ್ಲದಿದ್ದರೆ ಗೆಲ್ಲಲ್ಲ, ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ನವರು ಸೇರಿಕೊಂಡಿದ್ದಾರೆ ಇದರಿಂದ ನನಗೇನೂ ಭಯವಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದ್ದು ನನ್ನ ಮೇಲೆ ವ್ಯತ್ಯಾಸ ಆಗಲ್ಲ ಎಲ್ಲರೂ ಕಾಂಗ್ರೆಸ್ ಟಿಕೆಟ್ ಪ್ರಯತ್ನ ಮಾಡುತ್ತಿದ್ದರು. ಕಾಂಗ್ರೆಸ್ ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅನ್ನಬಹುದಾ?. ನಾನು ಈ ರೀತಿ ಆರೋಪ ಮಾಡಲ್ಲ, ಯಾರು ಯಾರ ಜತೆಗಾದರೂ ಸೇರಿಕೊಳ್ಳಲಿ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆ. ಸಿದ್ದರಾಮಯ್ಯ ವರುಣಾದಿಂದ ಆರೇಳು ಸಲ ಗೆದ್ದು ಬಂದವರು, ಈ ಮೊದಲು ಅವರಿಗೆ ಕ್ಷೇತ್ರದ ಅನಿಶ್ಚಿತತೆ ಇತ್ತು. ಈಗ ಕ್ಷೇತ್ರದ ಒಳಗಡೆ ಅನಿಶ್ಚಿತತೆ ಇದೆ ಎಂದು ಟಾಂಗ್ ಕೊಟ್ಟರು.
ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಮಿಸ್ ಆಗಿರುವ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ನಾಮಪತ್ರ ಪ್ರಕ್ರಿಯೆ ಮುಗಿದ ಮೇಲೆ ಪ್ರಧಾನಿ ಅವರು ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಪ್ರಯೋಗ.. ಶಾಸಕ ರೇಣುಕಾಚಾರ್ಯ ಹೀಗಂದ್ರು