ನವದೆಹಲಿ/ಬೆಂಗಳೂರು: ಬಿಟ್ ಕಾಯಿನ್ ನಲ್ಲಿ ಕಾಂಗ್ರೆಸ್ಸಿಗರ ಹೆಸರು ಇದೆ. ಅದರ ಬಗ್ಗೆ ಯೋಚನೆ ಮಾಡಲಿ ಎಂದು ಬಿಜೆಪಿ ವಿರುದ್ಧ ಬಿಟ್ ಕಾಯಿನ್ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿ, ಕಾಂಗ್ರೆಸ್ ನವರೇ ಇದರಲ್ಲಿ ಇದ್ದಾರೆ. ಅದರ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳಲಿ ಎಂದರು.
ಬಿಟ್ ಕಾಯಿನ್ ಪ್ರಕರಣ ಸಿಎಂ ಬೊಮ್ಮಾಯಿ ಬಲಿ ಪಡೆಯಲಿದೆ, ಈ ಬಾರಿಯೂ ಬಿಜೆಪಿಯಲ್ಲಿ ಮೂರನೇ ಸಿಎಂ ಬರಲಿದ್ದಾರೆ ಎನ್ನುವ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ಪಾಪ ಪ್ರಿಯಾಂಕ್ ಖರ್ಗೆಗೆ ಸರಿಯಾದ ಮಾಹಿತಿ ಪಡೆದುಕೊಳ್ಳೋದಕ್ಕೆ ಹೇಳಿ ಎಂದು ಟಾಂಗ್ ನೀಡಿದರು.
ಇಂದು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇನೆ, ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ನಾಳೆ ವಾಪಸ್ ಆಗುತ್ತೇನೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಡ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ. ಅವಕಾಶ ಸಿಕ್ಕಲ್ಲಿ ಮಾತುಕತೆ ನಡೆಸಲಿದ್ದೇನೆ ಎಂದು ಸಿಎಂ ಹೇಳಿದ್ದಾರೆ.