ಬೆಂಗಳೂರು: ಸುಸ್ಥಿರ ಅಭಿವೃದ್ಧಿಗಾಗಿ 'ನ್ಯಾನೋ ತಂತ್ರಜ್ಞಾನ' ಎಂಬ ಧ್ಯೇಯದೊಂದಿಗೆ 12ನೇ ವರ್ಷದ 'ಬೆಂಗಳೂರು - ಇಂಡಿಯಾ ನ್ಯಾನೋ ಸಮಾವೇಶ' ನಡೆಯುತ್ತಿದೆ.
ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಇಂದಿನಿಂದ ಮಾ.9ರವರೆಗೆ ಸಮಾವೇಶ ನಡೆಯಲಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ವರ್ಚುಯಲ್ ಮೂಲಕ ಭಾರತ ರತ್ನ ಪ್ರೊ. ಸಿ ಎನ್ ಆರ್ ರಾವ್ ಭಾಗಿಯಾಗಿದ್ದರು.
ಟ್ಯುಟೋರಿಯಲ್ ಮಾದರಿಯ ಕಾರ್ಯಕ್ರಮ: ಸಮಾವೇಶಕ್ಕೆ ಕೆನಡಾ, ಇಸ್ರೇಲ್, ಜರ್ಮನಿ, ನೆದರ್ಲ್ಯಾಂಡ್ ಮತ್ತು ಜಪಾನ್ ಸೇರಿದಂತೆ 10 ರಾಷ್ಟ್ರಗಳು ಭಾಗವಹಿಸುತ್ತಿವೆ. ಜತೆಗೆ ಐದು ಉದ್ಯಮ ಸಂಸ್ಥೆಗಳು ಕೂಡ ಸಮಾವೇಶಕ್ಕೆ ಹೆಗಲು ಕೊಡುತ್ತಿವೆ. ಮಾರ್ಚ್ 7, 8ರಂದು ಸಮಾವೇಶದ ಚಟುವಟಿಕೆಗಳು ನಡೆಯಲಿದ್ದು, ಕೊನೆಯ ದಿನವಾದ 9 ರಂದು ಇಡೀ ದಿನ ತಲಾ 1 ಗಂಟೆ ಕಾಲದ ಅವಧಿಯ ಟ್ಯುಟೋರಿಯಲ್ ಮಾದರಿಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ.
ನ್ಯಾನೋ ಮೆಡಿಸಿನ್, ನ್ಯಾನೋ ಫೋಟೋನಿಕ್ಸ್, ನ್ಯಾನೋ ಟೆಕ್ಸ್-ಟೈಲ್ಸ್ ಮತ್ತು ಹೈಡ್ರೋಜನ್ ಆರ್ಥಿಕತೆ ಕುರಿತು ಸಮಾವೇಶದಲ್ಲಿ ಪ್ರಧಾನವಾಗಿ ಗೋಷ್ಠಿಗಳು ನಡೆಯಲಿವೆ. ಒಟ್ಟಾರೆಯಾಗಿ ನವೋದ್ಯಮಗಳು, ಭಾರೀ ಕೈಗಾರಿಕೆಗಳು, ಮಧ್ಯಮ ಮತ್ತು ಸಣ್ಣ ಉದ್ದಿಮೆಗಳು, ವೆಂಚರ್ ಕ್ಯಾಪಿಟಲ್ ಇವುಗಳತ್ತ ಕೇಂದ್ರೀಕರಿಸಲಾಗುತ್ತದೆ.
4 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ: ಈ ಸಮಾವೇಶದಲ್ಲಿ 25ಕ್ಕೂ ಹೆಚ್ಚು ಪೂರ್ಣ ಪ್ರಮಾಣದ ಗೋಷ್ಠಿಗಳನ್ನು ಏರ್ಪಡಿಸಿದ್ದು, 75ಕ್ಕೂ ಹೆಚ್ಚು ಪರಿಣಿತರು ಮಾತನಾಡಲಿದ್ದಾರೆ. ಜತೆಗೆ 40 ಪ್ರದರ್ಶನ ಮಳಿಗೆಗಳು ಇರಲಿದ್ದು, ಒಟ್ಟಾರೆಯಾಗಿ 4 ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಐವರಿಗೆ ಪುರಸ್ಕಾರ: ನ್ಯಾನೋ ವಿಜ್ಞಾನದಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿರುವ ಐವರು ಯುವ ಪ್ರತಿಭಾವಂತರಿಗೆ ರಾಜ್ಯ ಸರ್ಕಾರದ ವತಿಯಿಂದ 'ನ್ಯಾನೋ ಎಕ್ಸಲೆನ್ಸ್' ಪುರಸ್ಕಾರ ಮತ್ತು 'ಸಿಎನ್ಆರ್ ರಾವ್' ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು 'ನ್ಯಾನೋ ಫಾರ್ ಯಂಗ್' ಮತ್ತು 'ನ್ಯಾನೋ ಕ್ವಿಜ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.
ಜನರ ಬದುಕನ್ನ ಸುಧಾರಿಸುವುದು ಪ್ರಧಾನಿ ಕನಸು: ಸಮಾವೇಶಕ್ಕೆ ಚಾಲನೆ ನೀಡಿ ಮಾತಾನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಪ್ರೊ.ಸಿ ಎನ್ ಆರ್ ರಾವ್ ಅವರನ್ನು ಹೊಂದಿರುವುದು ಬಹಳ ಸಂತಸ ತಂದಿದೆ. ವಿದ್ಯಾರ್ಥಿಗಳು ಈ ನ್ಯಾನೋ ಟೆಕ್ನಾಲಜಿ ಬಳಸಬೇಕು. ಈ ಮೂಲಕ ನಮ್ಮ ಬದುಕು ಸುಧಾರಿಸಲು ಸಾಧ್ಯವಾಗುತ್ತದೆ. ಸಂಶೋಧನಾ ಕೇಂದ್ರ, ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.
ನ್ಯಾನೋ ಸಮಾವೇಶದಲ್ಲಿ 2000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಾರೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. 108 ವಿಶ್ವದರ್ಜೆಯ ನ್ಯಾನೋ ಟೆಕ್ ಸಂಶೋಧನೆ ಕೇಂದ್ರ ಬೆಂಗಳೂರಿನಲ್ಲಿದೆ. ಮೋದಿಯವರು ನ್ಯಾನೋ ಯೂರಿಯಾವನ್ನು ರೈತರಿಗೆ ಪರಿಚಯಿಸಿದ್ದಾರೆ. ಸಂಶೋಧನೆಯಿಂದ ಜನರ ಬದುಕು ಸುಧಾರಿಸುವುದು ಪ್ರಧಾನಿಯವರ ಕನಸು.
ಕೃಷಿ, ಜೀವ - ವಿಜ್ಞಾನ ಮುಂತಾದ ಎಲ್ಲ ಕ್ಷೇತ್ರಲ್ಲೂ ಸಂಶೋಧನೆ ನಡೆಸಲು ಸರ್ಕಾರ ಸಹಾಯ ಮಾಡುತ್ತದೆ. ನ್ಯಾನೋ ತಂತ್ರಜ್ಞಾನ ನಿರಂತರ ಕಲಿಕೆಯ ಭಾಗವಾಗಿದ್ದು, ಡೈನಾಮಿಕ್ ಲೀಡರ್ ಆಗಿರುವ ಸಚಿವ ಅಶ್ವತ್ಥ ನಾರಾಯಣ ಮುಂದಾಳತ್ವ ವಹಿಸಿದ್ದಾರೆ. ಇಂತಹ ಅದ್ಬುತ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: 'ಯಶಸ್ವಿನಿ ಯೋಜನೆ' ಮರು ಜಾರಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದರಾ ಸಿಎಂ ಬೊಮ್ಮಾಯಿ?