ಬೆಂಗಳೂರು: ನಾನು ಮುಖ್ಯಮಂತ್ರಿ ಎಂದು ಹಿಂದೆಯೂ ಅನೇಕ ಪ್ರಕರಣಗಳಲ್ಲಿ ತೋರಿಸಿಕೊಟ್ಟಿದ್ದೇನೆ, ಮುಂದೆಯೂ ತೋರಿಸಿಕೊಡುತ್ತೇನೆ, ತೋರಿಸಿಕೊಡಬೇಕಾ? ಎಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆದ ಸಂದರ್ಭ ವಿಧಾನ ಪರಿಷತ್‌ನಲ್ಲಿ ನಡೆಯಿತು.
ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ, ಭೂ ಪರಿವರ್ತನೆಗೊಂಡ ಏಕನಿವೇಶನ ವಿಭಜನೆಯನ್ನು ಬಿಬಿಎಂಪಿ ಒಂದು ಬಾರಿ ಖಾತೆ ಆದ ನಂತರ ವಿಭಜನೆ ಮಾಡಲು ಸಾಧ್ಯವಿಲ್ಲ. ಆದರೆ ಅಧಿಕಾರಿಗಳು ಮಾಡುತ್ತಿದ್ದಾರೆ. ಇದರಿಂದ ಬಿಬಿಎಂಪಿಗೆ ಶುಲ್ಕ, ಕಂದಾಯ ಹೋಗುತ್ತೆ. ಸಿಎಂ ಬೇರೆ ಕೆಲಸದಲ್ಲಿ ಇರುತ್ತಾರೆ ಅಂತ ಅಧಿಕಾರಿಗಳ ಬೇಜವಾಬ್ದಾರಿ ಮಾಡುತ್ತಾರೆ. ಯಾರು ಕೆಲಸ ಮಾಡುತ್ತಾರೋ ಅವರನ್ನು ಉಳಿಸಿ ಮೈಗಳ್ಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುವಂತೆ ಯು.ಬಿ.ವೆಂಕಟೇಶ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ, ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಯು.ಬಿ.ವೆಂಕಟೇಶ್, ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ ಏಕ ನಿವೇಶನವನ್ನು ನಿಯಮಬಾಹಿರವಾಗಿ ವಿಭಜನೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಅಧಿಕಾರಿ ಮೇಲೆ ಕೈಗೊಂಡಿರುವ ಕ್ರಮ ಏನು?, ಕ್ರಮ ಕೈಗೊಂಡ ಸಿಎಂ ನಮ್ಮ ರಾಜ್ಯದಲ್ಲಿ ಇದ್ದಾರೆ ಎಂದು ತೋರಿಸಿಕೊಡಿ ಎಂದು ಸವಾಲೆಸೆದರು. ವೆಂಕಟೇಶ್ ಅವರ ಈ ಹೇಳಿಕೆಯಿಂದ ಸಿಎಂ ಬೊಮ್ಮಾಯಿ ಗರಂ ಆದರು. ಇದನ್ನು ಕಂಡು ತಣ್ಣಗಾದ ವೆಂಕಟೇಶ್ ,ಇಲ್ಲ ಇಲ್ಲ ಸರ್, ಹಾಗಲ್ಲ ಎಂದು ಸಾವರಿಸಿಕೊಂಡು ವಿನಯಕ್ಕೆ ಮರಳಿದರು.
ಕೆಆರ್‌ಐಡಿಎಲ್‌ಗೆ ಕಾಮಗಾರಿ ನೀಡಲ್ಲ: ಕೆಆರ್‌ಐಡಿಎಲ್‌ಗೆ ನೀಡುವ ಕಾಮಗಾರಿಗಳಲ್ಲಿ ಕಡಿತಗೊಳಿಸಿದ್ದು, ಕೊಟ್ಟಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆಆರ್‌ಐಡಿಎಲ್ ಯಾಕೆ ಕಾಮಗಾರಿ ಕೊಡಬೇಕು ಕೋಟ್ಯಂತರ ಹಣ ವ್ಯರ್ಥ ಆಗುತ್ತಿದೆ. ಗುಣಮಟ್ಟದ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ಹಲವು ಕಡೆ ಇನ್ನೂ ರಸ್ತೆ ಗುಂಡಿಗಳಿವೆ. ಹೀಗಾಗಿ ಕೆಆರ್‌ಐಡಿಎಲ್‌ಗೆ ಮತ್ತೆ ಯಾಕೆ ಕಾಮಗಾರಿ ಕೊಡುತ್ತೀರಿ ಎಂದು ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೆಆರ್‌ಐಡಿಎಲ್ ಹಣ ನೀಡುವುದು ನಾವು ನಿಲ್ಲಿಸಿದ್ದೇವೆ.
ಬಿಬಿಎಂಪಿ, ಕೆಆರ್‌ಐಡಿಎಲ್ ಚಿಕ್ಕಪ್ಪ, ದೊಡ್ಡಪ್ಪ ಮಕ್ಕಳು ಇದ್ದ ಹಾಗೆ. ವಿರೋಧ ಪಕ್ಷದಲ್ಲಿ ನಿಲ್ಲಿಸಬೇಕು ಅಂತಾರೆ. ಆದರೆ ಅಧಿಕಾರಕ್ಕಾಗಿ ಮುಂದುವರೆಸುತ್ತಾರೆ. ಈಗ ನಾನು ಹಲವು ಯೋಜನೆ ಕೆಆರ್‌ಐಡಿಎಲ್ ಗೆ ಕೊಡುವುದನ್ನು ರದ್ದು ಮಾಡಿದ್ದೇನೆ. ಈಗ ಅವರಿಗೆ ಕೊಟ್ಟಿರುವ ಯೋಜನೆ ಕಾಮಗಾರಿ ಗುಣಮಟ್ಟದ ಕೆಲಸ ಆಗಬೇಕು ಅಂತ ಹೇಳಿದ್ದೇನೆ ಎಂದರು.
ಪೈತಾನ್ ಯಂತ್ರದ ಮೂಲಕ ರಸ್ತೆ ನಿರ್ಮಾಣ: ವೈಟ್ ಟ್ಯಾಪಿಂಗ್‌ಗೆ 9-10 ಕೋಟಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲೂ ಈಗ ವೈಟ್ ಟ್ಯಾಪಿಂಗ್ ಮಾಡುತ್ತೇವೆ.182 ಕೀ.ಲೋ ಮೀಟರ್ ರಸ್ತೆಯನ್ನು ಪೈತಾನ್ ಮೂಲಕ ಮಾಡುತ್ತಿದ್ದೇವೆ. ಕಾಮಗಾರಿ ಸುಲಭ ಮತ್ತು ವೇಗವಾಗಿ ಮುಗಿಯುತ್ತದೆ. ಈ ಮಿಷನ್ ಮೂಲಕನೇ ಗುಂಡಿ ಮುಚ್ಚುವ ಕೆಲಸ ಮಾಡಿ ಎಂದು ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ವಿಚಾರ ಕುರಿತು ಕಾಂಗ್ರೆಸ್ ಸದಸ್ಯ ಎಸ್.ರವಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈ ಡೆನ್ಸಿಟಿ ರಸ್ತೆ ನಿರ್ಮಿಸಲು 800 ಕೋಟಿಗೆ ಟೆಂಡರ್ ಆಗಿದೆ. ರಸ್ತೆ ಮಾಡಲು 350 ಕೋಟಿ ನಿರ್ವಹಣೆ ಮಾಡಲು 550 ಕೋಟಿ ಆಗಲಿದೆ. ಯಾರು ಟೆಂಡರ್ ತೆಗೆದುಕೊಂಡಿರುತ್ತಾರೋ ಅವರು 2 ವರ್ಷ ನಿರ್ವಹಣೆ ಮಾಡಬೇಕು ಆದರೆ ಅದನ್ನು ಸರ್ಕಾರದವರು ಭರಿಸಬೇಕು ಎಂದು ಹೇಳುತ್ತಿದ್ದಾರೆ. ಹೀಗೆ 5-6 ಕಾರಣಗಳಿಂದ ಈ ಟೆಂಡರ್ ಕ್ಯಾನ್ಸಲ್ ಮಾಡಿದ್ದಾರೆ ಮತ್ತೆ ರೀ ಟೆಂಡರ್ ಕರೆದಿದ್ದೇವೆ ರಸ್ತೆ ನಿರ್ವಹಣೆಗೆ ವಿಶೇಷ ಕೋಡ್ ಮಾಡುತ್ತೇವೆ ಎಂದರು.
ಕೆಆರ್‌ಐಡಿಎಲ್ ಬಗ್ಗೆ ಲೋಕಾಯುಕ್ತ ತನಿಖೆ ಮಾಡಿ ವರದಿ ನೀಡಿದ ಹಿನ್ನೆಲೆಯಲ್ಲಿ ಅದರ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಎಲ್ಲಾ ಕೆಲಸಗಳು ಯಾರ ಕಾಲದಲ್ಲಿ ಆಗಿದೆ, ಯಾವ ಅಧಿಕಾರಿ ಪ್ರಭಾವ ಬೀರಿದ್ದಾರೆ ಎನ್ನುವುದು ಗೊತ್ತಿದೆ, ಇದರಲ್ಲಿ ಯಾರೆ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಬಿಬಿಎಂಪಿ ಅಧಿಕಾರಿ, ಯಾವುದೇ ಸಂಸ್ಥೆ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಲೋಕಾಯುಕ್ತ ಅಧಿಕಾರಿಗಳು ರಸ್ತೆ ಕಾಂಟ್ರಾಕ್ಟ್ ಬಗ್ಗೆ ಮಾತ್ರ ವರದಿ ನೀಡಿದ್ದಾರೆ. ಹಾಗಾಗಿ ಕೆಆರ್‌ಐಡಿಎಲ್ ಎಲ್ಲಾ ಕೆಲಸವನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು.
ಗೆಜೆಟೆಡ್ ಪ್ರೊಬೇಷನರಿ ಉತ್ತರ ಪತ್ರಿಕೆ ಕೊಡುವ ಬಗ್ಗೆ ಪರಿಶೀಲನೆ: 2008,2010,2014 ರಲ್ಲಿ ಕೆಪಿಎಸ್ಸಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಉತ್ತರ ಪತ್ರಿಕೆ ನೋಡಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಸಂಬಂಧ ನ್ಯಾಯಾಲಯದ ತೀರ್ಪು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕ ವಿಚಾರ ಕುರಿತು ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ತಮ್ಮ ಉತ್ತರ ಪತ್ರಿಕೆ ನೋಡಲು ಅವಕಾಶ ಕೋರಿದ್ದಾರೆ. ಆದರೆ ಈಗಾಗಲೇ ಅನೇಕ ಆದೇಶಗಳು ಈ ವಿಚಾರದಲ್ಲಿ ಆಗಿವೆ. ಉತ್ತರ ಪತ್ರಿಕೆ ಕೊಡುವ ಅವಶ್ಯಕತೆ ಇಲ್ಲ ಅಂತ ಕೋರ್ಟ್ ತೀರ್ಪಿದೆ.ಇದನ್ನು ಪ್ರಶ್ನಿಸಿ ರಿಟ್ ಅರ್ಜಿ ಹಾಕಲಾಗಿದೆ. ಇದು ಕೋರ್ಟ್‌ನಲ್ಲಿದೆ. ಆದರೆ ಸುಪ್ರೀಂ ಕೋರ್ಟ್ ಉತ್ತರ ಪತ್ರಿಕೆ ಕೊಡಬಹುದು ಅಂತ ಹೇಳಿದ್ದಾರೆ ಅಂತ ಹೇಳ್ತಾ ಇದ್ದಾರೆ. ಎಲ್ಲಾ ಮಾಹಿತಿ ತರಿಸಿಕೊಂಡು ನಂತರ ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಸಹಾಯ ಆಗುವಂತೆ ಮಾಡುತ್ತೇವೆ ಎಂದರು.
ಕಾವೇರಿ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯುವುದು ಅನಿವಾರ್ಯ: ಕಾವೇರಿ ಪೈಪ್ ಲೈನ್ ಅಳವಡಿಕೆ ಕಾರಣದಿಂದಾಗಿ ರಸ್ತೆಗಳನ್ನು ಅಗಿಯುವುದು ಅನಿವಾರ್ಯವಾಗಿದ್ದು, ಅಗಿದು ಬಹಳ ದಿನ ಹಾಗೆಯೇ ಬಿಡದಂತೆ ಜಲಮಂಡಳಿಗೆ ಸೂಚನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರು ಅಭಿವೃದ್ಧಿ ವಿಚಾರ ಕುರಿತು ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು ಮಾಡಿರುವ ಕಾಮಗಾರಿಗೆ ಮತ್ತೆ ಮತ್ತೆ ಹಣ ಪಡೆಯಲಾಗುತ್ತಿದೆ, ಒಂದೆ ಕಂಪನಿಗೆ 1 ಕೋಟಿ 2 ಕೋಟಿ ಕೊಟ್ಟಿದ್ದಾರೆ, ಕೋಟ್ಯಾಂತರ ಖರ್ಚು ಆಗಿದ್ದರೂ ರಸ್ತೆ ಸರಿಯಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, 110 ಹಳ್ಳಿಗಳಿಗೆ ಒಳಚರಂಡಿ ಅಭಿವೃದ್ಧಿ ಮಾಡಲಾಗಿದೆ,110 ಹಳ್ಳಿಗಳೂ ಹೊಸದಾಗಿ ಬೆಂಗಳೂರಿಗೆ ಸೇರಿವೆ ಅಲ್ಲಿಗೆ ನೀರು ಕೋಡೋಕೆ ಆಗಿಲ್ಲ. ಹೀಗಾಗಿ ಪೈಪ್ ಲೈನ್ ಮಾಡಲಾಗುತ್ತಿದೆ. ಕಾವೇರಿ ಲೈನ್ ಬಂದರೆ ಅದು ಇಡೀ ರಸ್ತೆಗೆ ವ್ಯಾಪಿಸುತ್ತದೆ. ಅದೇ ಜನರಿಗೆ ಸಮಸ್ಯೆ ಆಗುತ್ತಿದೆ. ಆ ರಸ್ತೆಗಳ ಅಭಿವೃದ್ಧಿಗಳಿಗೆ ಕ್ರಮ ವಹಿಸಲಾಗಿದೆ ಎಂದರು.
ಶಾದಿ ಮಹಲ್ ಬಿಟ್ಟರೆ ಅಲ್ಪಸಂಖ್ಯಾತರ ಯಾವುದೇ ಯೋಜನೆ ನಿಲ್ಲಿಸಿಲ್ಲ: ಅಲ್ಪಸಂಖ್ಯಾತರಿಗೆ ಸೇರಿದ ಶಾದಿ ಮಹಲ್ ಒಂದು ಯೋಜನೆ ನಿಲ್ಲಿಸಿದ್ದು ಬಿಟ್ಟರೆ ಮತ್ತಿನ್ಯಾವ ಯೋಜನೆಯನ್ನೂ ನಿಲ್ಲಿಸಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಂಗಮ ಮುನಿದರೆ ನಾ ಉಳಿವೆನಯ್ಯಾ ಅಂತಾರೆ, ನೀವು ಸಿಟ್ಟಾಗಬೇಡಿ ದಯವಿಟ್ಟು ಎಂದು ಸಿಎಂ ಗೆ ಮನವಿ ಮಾಡಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಇರುವ ಯೋಜನೆಗಳು ಯಾವವು ಒಂದಿಷ್ಟು ಸ್ಕೀಂ ನಿಲ್ಲಿಸಲಾಗಿದೆ ಹೀಗೆ ಮಾಡಬೇಡಿ ಎಂದರು.
ಇದಕ್ಕೆ ಉತ್ತರಿಸಿದ ಸಿಎಂ, ಇಬ್ರಾಹಿಂ ಅವರು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ. ಯಾವ ಸ್ಕೀಂ ನಿಲ್ಲಿಸಬಾರದು ಅಂತ ಹೇಳಿದ್ದಾರೆ. ಆದರೆ ಶಾದಿ ಮಹಲ್ ಒಂದು ನಿಲ್ಲಿಸಿದ್ದಾರೆ ಮತ್ತಿನ್ಯಾವುದನ್ನೂ ನಿಲ್ಲಿಸಿಲ್ಲ. ಗಂಗಾ ಕಲ್ಯಾಣ ಮುಂದುವರೆಸಿದ್ದೇವೆ. ಪಿಹೆಚ್ ಡಿ ಸ್ಕೀಂ ನಿಂತಿತ್ತು ನಾನು ಬಂದ ಮೇಲೆ ಮುಂದುವರೆಸಿದ್ದೇನೆ. ಅರಿವು ಸ್ಕೀಂ ಇದೆ ಅದಕ್ಕೆ ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ಅನುದಾನ ಕೊಡಲಾಗಿದೆ.
ಗಂಗಾ ಕಲ್ಯಾಣ ಘಟಕ ವೆಚ್ಚ ಒಂದು ವರೆ ಲಕ್ಷ ಇತ್ತು ಎರಡು ಲಕ್ಷ ಮಾಡುತ್ತಿದ್ದೇವೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಸ್ಕೂಲ್ ಅಪ್ ಗ್ರೇಟ್ ಮಾಡುತ್ತಿದ್ದೇವೆ. ಸಿಬಿಎಸ್ ಸಿ ಸ್ಕೂಲ್ ಮಾಡುತ್ತಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಲೋನ್ ಯೋಜನೆ ಮಾಡಲಾಗಿದೆ. ಮೈನಾರಿಟಿ ಅತಿ ಹೆಚ್ಚು ಇರುವ ಕಾಲೋನಿಗಳ ಡೆವಲಪ್ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಸಿಎಂ ಉತ್ತರಕ್ಕೆ ತೃಪ್ತರಾದ ಸದಸ್ಯ ಇಬ್ರಾಹಿಂ, ನಿಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ ನಿಮ್ಮ ಅಪ್ಪನ ಹೆಸರು ನೀವು ಉಳಿಸ್ತಾ ಇದ್ದೀರಾ ನಿಮಗೆ ಒಳ್ಳೆಯದಾಗಲಿ ಎಂದರು.