ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮತದಾರರ ಪರಿಷ್ಕರಣೆ ಅಕ್ರಮ ಸಂಬಂಧ ತನಿಖೆ ಚುರುಕುಗೊಳಿಸಿರುವ ಕೇಂದ್ರ ವಿಭಾಗದ ಪೊಲೀಸರು ಶನಿವಾರ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಅಲಿಯಾಸ್ ಕೃಷ್ಣೇಗೌಡನನ್ನು ಬಂಧಿಸಿದ್ದಾರೆ.
ರವಿಕುಮಾರ್ ಪತ್ನಿ ಐಶ್ವರ್ಯ ಮತ್ತು ಸಹೋದರ ಕೃಷ್ಣೇಗೌಡ ಪತ್ನಿ ಶೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಶುಕ್ರವಾರ ಬಂಧಿಸಲಾದ ಇಬ್ಬರು ಆರೋಪಿಗಳಾದ ರೇಣುಕಾ ಪ್ರಸಾದ್ ಮತ್ತು ಧರ್ಮೇಶ್‌ನನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.
ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದ ಕೃಷ್ಣೇಗೌಡನನ್ನು ಬಂಧಿಸಲಾಗಿದೆ. ಚೆಲುಮೆ ಸಂಸ್ಥೆಗೆ ಸೇರಿದ ಹಣಕಾಸಿನ ವ್ಯವಹಾರವನ್ನು ಈತನೇ ನೋಡಿಕೊಳ್ಳುತ್ತಿದ್ದ. ಮತ್ತೊಬ್ಬ ಆರೋಪಿ ರವಿಕುಮಾರ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಐಶ್ವರ್ಯ ಮತ್ತು ಶೃತಿ ಚಿಲುಮೆ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದು, ಜತೆಗೆ ಪತಿಯರು ಮಾಡುತ್ತಿದ್ದ ಪ್ರತಿಯೊಂದು ವ್ಯವಹಾರದ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದೆಡೆ ಕೃಷ್ಣಪ್ಪ ಪತ್ನಿ ಶೃತಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆಲ ಮಹತ್ವದ ದಾಖಲೆಗಳನ್ನು(ಲ್ಯಾಪ್‌ಟಾಪ್ , ಹಾರ್ಡ್ ಡಿಸ್ಕ್) ಬೇಗೂರಿನಲ್ಲಿರುವ ತೋಟದ ಮನೆಗೆ ಸಾಗಿಸಿದ್ದಾರೆ ಎಂಬ ಆರೋಪದ ಕೇಳಿಬಂದಿದೆ. ಸಂಸ್ಥೆಯ ಸಿಸಿ ಕ್ಯಾಮೆರಾದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್ ಸಾಗಾಟದ ಬಗ್ಗೆ ದೃಶ್ಯಗಳು ಸೆರೆಯಾಗಿವೆ. ಹೀಗಾಗಿ ಆಕೆಯ ವಿಚಾರಣೆ ಮುಂದುವರಿದಿದೆ. ಮತ್ತೊಂದೆಡೆ ಇವರ ತಂದೆ ನೆಲಮಂಗಲದ ಮೂಲದ ಹುಚ್ಚಣ್ಣ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೆಟರ್ ಹೆಡ್‌ಗಳು ಪತ್ತೆ: ಮತ್ತೊಂದು ಸ್ಪೋಟಕ ವಿಚಾರ ಬೆಳಕಿಗೆ ಬಂದಿದ್ದು, ಸಂಸ್ಥೆ ಮೇಲೆ ದಾಳಿ ನಡೆಸಿದಾಗ ಅಲ್ಲಿದ್ದ ಕಂಪ್ಯೂಟರ್‌ಗಳು, ಡಿಜಿಟಲ್ ಮಾಹಿತಿ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಕೆಲ ರಾಜಕಾರಣಿಗಳ ಲೆಟರ್ ಹೆಡ್‌ಗಳು, ಅಧಿಕಾರಿಗಳ ವಿಸಿಟಿಂಗ್ ಕಾರ್ಡ್‌ಗಳು ಪತ್ತೆಯಾಗಿವೆ. ಜತೆಗೆ ಕೆಲ ಪ್ರಭಾವಿ ರಾಜಕೀಯ ಮುಖಂಡರ ಜತೆ ಒಪ್ಪಂದ ಮಾಡಿಕೊಂಡಿರುವ ಕರಾರು ಪತ್ರಗಳು ಪತ್ತೆಯಾಗಿವೆ.
ತಮ್ಮ ಕ್ಷೇತ್ರದ ಚುನಾವಣಾ ಸಮೀಕ್ಷೆಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಚಿಲುಮೆ ಸಂಸ್ಥೆ ಅಧಿಕೃತವಾಗಿ ಕಚೇರಿ ಹೊಂದಿದ್ದರೂ ಅಕ್ರಮ ವ್ಯವಹಾರ ನಡೆಸಲು ಅನಧಿಕೃತವಾಗಿ ಬೇರೊಂದ ಕಟ್ಟಡ ಹೊಂದಿರುವುದು ಪತ್ತೆೆಯಾಗಿದೆ ಎಂದಿದ್ದಾರೆ.
ಪಾಲಿಕೆ ವಲಯ ಅಧಿಕಾರಿ ಅಮಾನತು: ಈ ಮಧ್ಯೆ ಚಿಲುಮೆ ಸಂಸ್ಥೆಗೆ ಗುರುತಿನ ಚೀಟಿ ನೀಡಿದ್ದ ಮಹದೇವಪುರ ಬಿಬಿಎಂಪಿ ವಲಯದ ಅಧಿಕಾರಿ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಜತೆಗೆ ಮಹದೇವಪುರ ವಲಯ ಆರ್‌ಒ, ಎಆರ್‌ಒಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ. ಜತೆಗೆ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಂಸ್ಥೆಯ ಲೋಕೇಶ್ ಎಂಬಾತನ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
ಇಬ್ಬರು ವಶಕ್ಕೆ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿಲುಮೆ ಸಂಸ್ಥೆಯ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್‌ನನ್ನು ಶನಿವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿ ಹತ್ತು ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಜತೆಗೆ ಸುಧಾಕರ್ ಮತ್ತು ರಕ್ಷಿತ್ ವಿಚಾರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಕುಟುಂಬ ಸದಸ್ಯರು ಅಂದರ್: ಪ್ರಕರಣದ ಮಾಸ್ಟರ್‌ಮೈಂಡ್ ರವಿಕುಮಾರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ಪಡೆ ರಚಿಸಲಾಗಿದೆ. ಅಲ್ಲದೆ, ನೆಲಮಂಗಲದ ತಾಲೂಕಿನ ಕಲ್ಲನಾಯಕನಹಳ್ಳಿಯಲ್ಲಿರುವ ರವಿಕುಮಾರ್ ಪೋಷಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಮತ್ತೆ ಕೃಷ್ಣೇಗೌಡ ಪತ್ನಿ ಶೃತಿ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಬಳಕೆ : ಮತದಾರರ ಮಾಹಿತಿಗಾಗಿ ಕೆಲ ರಾಜಕೀಯ ಮುಖಂಡರಿಂದ ಹಣ ಪಡೆಯುತ್ತಿದ್ದ ಚಿಲುಮೆ ಸಂಸ್ಥೆ, ನಗರದ ಕೆಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂತಿಷ್ಟು ಹಣ ನೀಡಿ ಮತದಾರರ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಮತದಾರರ ಪರಿಷ್ಕರಣೆ ಅಕ್ರಮ ಬಗ್ಗೆ 2013 ರಿಂದ ಸಮಗ್ರ ತನಿಖೆ ಕೈಗೊಳ್ಳಿ: ಬಿಜೆಪಿ ನಿಯೋಗ ದೂರು