ಬೆಂಗಳೂರು: ಇಸ್ಕಾನ್ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ವಿಶೇಷವಾಗಿ ವಿಜಯದಶಮಿ ಹಬ್ಬ ಆಚರಿಸಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಸಂಭ್ರಮಿಸಿದ್ರು.
ಆರಂಭದಲ್ಲಿ ವೇಷಭೂಷಣ ಸ್ಪರ್ಧೆ, ಭಕ್ತಿ ಗೀತೆ, ಯಜ್ಞ, ಶ್ರೀರಾಮ ಸ್ಮರಣೆ, ಭಜನೆ, ಉಪನ್ಯಾಸ, ರಾವಣ-ಕುಂಬಕರ್ಣ ದಹನದಂಥ ಸಾಂಪ್ರದಾಯಿಕ ಆಚರಣೆ ಸಂಭ್ರಮಕ್ಕೆ ಮೆರಗು ನೀಡಿತು.
ಇದೇ ವೇಳೆ ಚಿಣ್ಣರು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ರಾಮ, ಸೀತೆ, ಹನುಮಂತ ಹೀಗೆ ನಾನಾ ಬಗೆಯ ವೇಷ ತೊಟ್ಟಿದ್ದ ಮಕ್ಕಳು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.
ಇದಾದ ಬಳಿಕ ಭಜನೆ ಮತ್ತು ರಾಮತಾರಕ ಯಜ್ಞ ಶಾಸ್ತ್ರೋಕ್ತವಾಗಿ ನೆರವೇರಿತು. ವಿಶ್ವಶಾಂತಿಗಾಗಿ ವೈದಿಕ ವಿಧಿವಿಧಾನಗಳೊಂದಿಗೆ ಯಜ್ಞ ನಡೆಯಿತು. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಶ್ರೀರಾಮನ ಪವಿತ್ರ ನಾಮ ಸ್ಮರಣೆ ಮಾಡಲಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ತಂಡದಿಂದ ಭಕ್ತಿ ಸಂಗೀತವನ್ನು ಆಯೋಜಿಸಲಾಗಿತ್ತು.