ಬೆಂಗಳೂರು: ಟೆಂಡರ್ ಕರೆಯುವ ಪ್ರಾಧಿಕಾರ ತಾಂತ್ರಿಕ ಬಿಡ್ ತೆರೆಯುವ ಮುನ್ನ ಎಲ್ಲ ಟೆಂಡರ್‌ದಾರರಿಗೆ ಮಾಹಿತಿ ನೀಡಿ ದಾಖಲೆಗಳಲ್ಲಿ ಬದಲಾವಣೆಗಳನ್ನು ತರಬಹುದಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಈ ಕುರಿತು ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಪೌಷ್ಟಿಕ ಆಹಾರ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ಗೆ ಸಲ್ಲಿಸಬೇಕಾದ ದಾಖಲೆಗಳಲ್ಲಿ ತಿದ್ದುಪಡಿ ತಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿಡ್‌ದಾರರಾದ ಆರ್.ರಜತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ - 2000ದ ನಿಯಮ 14ರ ಪ್ರಕಾರ ತಾಂತ್ರಿಕ ಬಿಡ್ ತೆರೆಯುವ ಮುನ್ನ, ಟೆಂಡರ್ ಕರೆದಿರುವ ಪ್ರಾಧಿಕಾರ ತನ್ನ ಸೀಮಿತ ಅಧಿಕಾರ ಬಳಸಿ ಟೆಂಡರ್ ದಾಖಲೆಗಳ ಸಲ್ಲಿಕೆಯ ನಿಯಮಗಳನ್ನು ಬದಲಾವಣೆ ಮಾಡಬಹುದಾಗಿದೆ. ಆದರೆ, ದಾಖಲೆಗಳ ತಿದ್ದುಪಡಿ ಕುರಿತು ಎಲ್ಲ ಟೆಂಡರ್‌ದಾರರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?: ರಾಮನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಆಹಾರ ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2022ರ ಮಾ.31ರಂದು ಟೆಂಡರ್ ಕರೆದಿತ್ತು. ಆಗ ಟೆಂಡರ್ ದಾಖಲೆಗಳಲ್ಲಿ ಒಂದಾದ 1 ವರ್ಷದ ಜಿಎಸ್‌ಟಿ ಸರ್ಟಿಫಿಕೇಟ್ ನೀಡಬೇಕೆಂಬ ನಿಯಮವಿತ್ತು.
2021ರಿಂದ ರಾಮನಗರ ಜಿಲ್ಲಾಸ್ಪತ್ರೆಗೆ ಸಿದ್ಧ ಆಹಾರ ಪೂರೈಸುತ್ತಿದ್ದ ಆರ್.ಆರ್.ಎಂಟರ್‌ಪ್ರೈಸಸ್‌ನ ಮಾಲೀಕ ರಜತ್ ಸಹ ಬಿಡ್ ಮಾಡಿದ್ದರು. ಆದರೆ, ಏ.8ರಂದು ಟೆಂಡರ್ ದಾಖಲೆಗಳ ತಿದ್ದುಪಡಿ ಆದೇಶ ಹೊರಡಿಸಿದ್ದ ಸರ್ಕಾರ, 3 ವರ್ಷದ ಜಿಎಸ್‌ಟಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಿತ್ತು. ಇದರಿಂದ, ಅರ್ಜಿದಾರರು ಅರ್ಹತೆ ಕಳೆದುಕೊಂಡಿದ್ದರು. ದಾಖಲೆಗಳ ತಿದ್ದುಪಡಿ ಪ್ರಶ್ನಿಸಿ ರಜತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮೀಸಲಾತಿ ನಿಗದಿಗೆ 3 ತಿಂಗಳ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ಬಿಬಿಎಂಪಿ ಮನವಿ