ಬೆಂಗಳೂರು: ಸಂಸದನಾಗಿ, ಕೇಂದ್ರ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದು ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿಯೇ ಈ ಚುನಾವಣೆ ಎದುರಿಸಲಿದ್ದೇನೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ 5 ವರ್ಷಗಳ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಶಾಸಕ ಡಾ. ಅಶ್ವತ್ ನಾರಾಯಣ, ಸುರೇಶ್ ಕುಮಾರ್, ವೈಎ ನಾರಾಯಣಸ್ವಾಮಿ, ಲೇಹರ್ ಸಿಂಗ್ ಸೇರಿದಂತೆ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಂತರ ಮಾತನಾಡಿದ ಸಚಿವರು, ನಿನ್ನೆ ಚುನಾವಣೆ ಘೋಷಣೆ ಆಗಿದೆ. ಕೆಲವರು ಚುನಾವಣಾ ಕೆಲಸದಲ್ಲಿ ಮುಂದು ಹೋಗಿದ್ದಾರೆ. ಇನ್ನು ಕೆಲವರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಯಾವತ್ತೂ ಚುನಾವಣೆ ಘೋಷಣೆ ಆಗೋದಕ್ಕೂ ಮೊದಲೇ ತಯಾರಿ ಮಾಡುತ್ತದೆ. ಈ ಬಾರಿಯೂ ನಾವು ಮೊದಲೇ ತಯಾರಿ ಆರಂಭಿಸಿದ್ದೇವೆ. 5 ತಿಂಗಳಿಂದ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಪ್ರತಿ ಬಜೆಟ್ಗೂ ಮುನ್ನ ಮೋದಿ ತಮ್ಮ ಪ್ರೋಗ್ರೆಸ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದರು. ನಮಗೂ ಈಗ ಸೂಚನೆ ನೀಡಿದ್ದು ನಮ್ಮ ಸಾಧನೆ, ಅಭಿವೃದ್ಧಿ ಕಾರ್ಯದ ಕುರಿತು ಜನರಿಗೆ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ. ಈಗ ಚುನಾವಣೆ ಬಂದಿದೆ 5 ವರ್ಷಗಳ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದೆ ಇಡುವಂತೆ ಮೋದಿ ಅವರ ಸೂಚನೆಯಂತೆ ಪ್ರತಿ ಸಂಸದರು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಾರೆ. ಹಾಗೆಯೇ ನಾನು ಕೂಡ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ಮಾಹಿತಿ ಜನರ ಮುಂದಿಡುತ್ತಿದ್ದೇನೆ ಎಂದರು.
ರಸ್ತೆ, ಮೇಲು ಸೇತುವೆ, ಅಂಡರ್ ಪಾಸ್ ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿದಿವೆ. ಕರ್ನಾಟಕ ಮುಕ್ತ ವಿವಿಗೆ ಮತ್ತೆ ಮರುಜೀವ ನೀಡಿದ್ದೇವೆ, ಸಬ್ ಅರ್ಬನ್ ರೈಲು ಯೋಜನೆಗೆ ನಾನು ರೈಲ್ವೆ ಸಚಿವನಾಗಿದ್ದಾಗಿಂದಲೇ ರೂಪುರೇಷೆ ಸಿದ್ದಪಡಿಸಿದ್ದು, ಈಗ ಚಾಲನೆ ಸಿಗುತ್ತಿದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ಔಷಧಗಳನ್ನು ಜನರಿಕ್ ಮೆಡಿಸಿನ್ ಗೆ ಸೇರಿಸಲಾಗಿದೆ. ಯಶವಂತಪುರಕ್ಕೆ ಕೇಂದ್ರಿಯ ವಿದ್ಯಾಲಯ ತಂದಿದ್ದೇನೆ. ಆದರ್ಶ ಗ್ರಾಮ ಯೋಜನೆಯಲ್ಲಿ 12 ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದೇವೆ. ಜೋಡಿ ಮಾರ್ಗ, ವಿದ್ಯುದೀಕರಣ, ಬೆಂಗಳೂರು, ಮೈಸೂರು ನಡುವೆ ಹತ್ತು ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಮ್ಮ ಅವಧಿಯ ಸಾಧನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದಾನಂದ ಗೌಡ ಮಾಹಿತಿ ನೀಡಿದರು.