ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ ಮುಂದಿಟ್ಟುಕೊಂಡು ನಮ್ಮ ಶಾಸಕರನ್ನು ಆತಂಕಕ್ಕೀಡುಮಾಡುವ ಯತ್ನ ನಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಡಿಸಿಎಂ ಡಾ. ಜಿ.ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ನಾನೇನೋ ಎಲ್ಲವನ್ನೂ ಅನುಭವಿಸುತ್ತಿದ್ದೇನೆ. ಉಳಿದವರಿಗೆ ಆ ಧೈರ್ಯ ಇಲ್ಲ. ನ್ಯಾಯಾಲಯ ನಮಗೆ ರಕ್ಷಣೆ ಕೊಡಬೇಕು. ಪಕ್ಷದ ಎಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಪಕ್ಷ ಬಲಪಡಿಸಲು, ಸರ್ಕಾರ ಉಳಿಸಲು ಎಲ್ಲಾ ವಿಧದ ತ್ಯಾಗಕ್ಕೂ ನಾವು ಸಿದ್ಧ. ನಾವು ಶೇರಿಂಗ್ ಹಾಗೂ ಕೇರಿಂಗ್ಅನ್ನ ನಂಬಿದ್ದೇವೆ. ಎಲ್ಲರಿಗೂ ಅವಕಾಶ ಸಿಗಲಿ, ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರ ಉಳಿಸಲು ಮುಂದಾಗಿದ್ದೇವೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಮುಂಬೈಗೆ ತೆರಳಿರುವ ನಮ್ಮ ಸ್ನೇಹಿತರು ಅವಕಾಶ ಕೇಳಿದ್ದಾರೆ. ಎಲ್ಲರಿಗೂ ಅವಕಾಶ ಲಭಿಸಲಿದೆ ಎಂದರು.
ಎಸ್.ಟಿ.ಸೋಮಶೇಖರ್ ಪಕ್ಷ ಉಳಿಸಿದ್ದಾರೆ. ಅವರೆಲ್ಲ ನಮ್ಮ ಪಕ್ಷದ ಸೈನಿಕರು. ಅವರಿಗೆ ಗನ್ ಪಾಯಿಂಟ್ ಇಟ್ಟಿದ್ದಾರೆ. ಇಡಿ, ಸಿಬಿಐ ಉಪಯೋಗಿಸುತ್ತಿದ್ದಾರೆ. ದೇಶದ ಕಾನೂನು ಹಾಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ನಾವು ಕಾನೂನಿಗೆ ವಿರುದ್ಧವಾಗಿ ಹೋಗಿದ್ದರೆ ನಮ್ಮ ವಿರುದ್ಧ ಯಾವ ಕ್ರಮವನ್ನೂ ಬೇಕಾದರೂ ಕೈಗೊಳ್ಳಲಿ. ಆದರೆ ಅನಗತ್ಯವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದ್ರು. ನಾಗೇಶ್ ನನಗೆ ದೂರವಾಣಿ ಕರೆ ಮಾಡಿದ್ರು. ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳಿ ಓಡಿ ಹೋಗಿದ್ದಾನೆ ಎಂದ್ರು.