ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕು ತಗುಲಿ ನಿನ್ನೆ ರಾತ್ರಿ ವಿಧಿವಶರಾದ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.
ದೆಹಲಿಯ ದ್ವಾರಕಾ ನಂಬರ್ ಸೆಕ್ಟರ್ 24 ನಲ್ಲಿ ಸಂಜೆ 4 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಮರಣೋತ್ತರ ಕೋವಿಡ್ ವರದಿಯೂ ಪಾಸಿಟಿವ್ ಬಂದಿದೆ.
ಕೊರೊನಾ ಸೋಂಕಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ನಾವೇ ನಿಯಮ ಉಲ್ಲಂಘಿಸುವುದು ಬೇಡ. ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಬೇಕು ಎಂದು ಕೇಂದ್ರ ಸರ್ಕಾರ ಕುಟುಂಬ ಸದಸ್ಯರಿಗೆ ಮನವಿ ಮಾಡಿದೆ. ತವರು ಕ್ಷೇತ್ರ ಬೆಳಗಾವಿಗೆ ಪಾರ್ಥಿವ ಶರೀರ ಕೊಂಡೊಯ್ಯಲು ಕಸರತ್ತು ನಡೆಸಿದ್ದ ಕುಟುಂಬ ಸದಸ್ಯರಿಗೆ ಹಿನ್ನಡೆಯಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅಂತಿಮ ದರ್ಶನ ಪಡೆದಿದ್ದಾರೆ. ಬೆಳಗಾವಿಯ ವಿಶ್ವೆಶ್ವರ ನಗರದಲ್ಲಿ ವಾಸವಿದ್ದ ಹಿರಿಯ ಸುಪುತ್ರಿ ಸ್ಫೂರ್ತಿ, ಮುಂಬೈಗೆ ತೆರಳಲಿದ್ದು, ಅಲ್ಲಿಂದ ವಿಮಾನದ ಮೂಲಕ ದೆಹಲಿ ತಲುಪಲಿದ್ದಾರೆ. ಸ್ಫೂರ್ತಿ ದೆಹಲಿಗೆ ತೆರಳಿದ ಬಳಿಕವೇ ಅಂತ್ಯಕ್ರಿಯೆಯ ವಿಧಿವಿಧಾನ ನಡೆಯಲಿವೆ. ಒಂದು ವಾರದಿಂದ ಅಂಗಡಿ ಅವರ ಪತ್ನಿ ಮಂಗಳಾ, ಕಿರಿಯ ಪುತ್ರಿ ಶೃದ್ಧಾ, ಸಂಬಂಧಿಯೂ ಆಗಿರುವ ಜಗದೀಶ್ ಶೆಟ್ಟರ್ ಕುಟುಂಬ ದೆಹಲಿಯಲ್ಲಿದೆ. ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರು ಸೇರಿದಂತೆ 25 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.