ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ತನ್ನನ್ನೂ ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕು ಎಂದು ಕೋರಿ ಪ್ರಕರಣದ ಯುವತಿ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ತನ್ನನ್ನೂ ವಾದಿಯಾಗಿಸುವಂತೆ ಕೋರಿ ಯುವತಿ ಸಲ್ಲಿಸಿರುವ ಅರ್ಜಿಯನ್ನು ಪೀಠ ಪರಿಶೀಲಿಸಿತು. ಯುವತಿ ಪರ ಹಾಜರಾದ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಯುವತಿ ಕೊಟ್ಟಿರುವ ದೂರು ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿರುವಾಗ ಅದನ್ನು ಮುಕ್ತಾಯಗೊಳಿಸಬಾರದು ಎಂದರು.
ಮಧ್ಯಪ್ರವೇಶಿಸಿದ ಎಜಿ ಪ್ರಭುಲಿಂಗ ನಾವದಗಿ, ಯುವತಿ ಬರೆದಿದ್ದ ಪತ್ರ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಅಷ್ಟರಲ್ಲಿ ಯುವತಿ ಏಕಸದಸ್ಯಪೀಠದ ಮುಂದೆ ತನಿಖೆಯನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯಲ್ಲಿ ವಿಭಾಗೀಯ ಪೀಠದ ಮುಂದಿರುವ ಅಂಶಗಳನ್ನು ಮರೆಮಾಚಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಯುವತಿ ಪರ ವಕೀಲರು, ಯುವತಿ ಎಸ್ಐಟಿ ತನಿಖೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ, ಆ ಅರ್ಜಿಯನ್ನೂ ಸಹ ಪಿಐಎಲ್ ನೊಂದಿಗೆ ವಿಚಾರಣೆ ನಡೆಸಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಗೃಹ ಸಚಿವರು ಎಸ್ಐಟಿ ರಚನೆಗೆ ಆದೇಶ ನೀಡಿರುವುದು ಕಾನೂನು ಬಾಹಿರವಾಗಿದೆ, ಆ ಬಗ್ಗೆ ಮುಂದಿನ ವಿಚಾರಣೆ ವೇಳೆ ವಾದ ಮಂಡಿಸಲಾಗುವುದು ಎಂದರು.
ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವ ಕುರಿತು ಅಡ್ವೊಕೇಟ್ ಜನರಲ್ ಕೂಡ ಸಮ್ಮತಿಸಿದರು. ಜತೆಗೆ ಎಸ್ಐಟಿ ತನಿಖಾ ಪ್ರಗತಿ ವರದಿಯನ್ನಷ್ಟೇ ಸಲ್ಲಿಸಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದರು.
ಕೊನೆಯಲ್ಲಿ, ಜಂಟಿ ಪೊಲೀಸ್ ಆಯುಕ್ತರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ಪೀಠ, ತನಿಖೆ ಇನ್ನೂ ಮುಂದುವರಿದಿರುವುದಾಗಿ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಎಸ್ಐಟಿ ಮುಖ್ಯಸ್ಥರ ಸಮ್ಮತಿ ಮೇರೆಗೆ ಜಂಟಿ ಪೊಲೀಸ್ ಆಯುಕ್ತರ ಸಹಿಯೊಂದಿಗೆ ತನಿಖಾ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿ, ವರದಿಯನ್ನು ಮತ್ತೆ ಮುಚ್ಚಿದ ಲಕೋಟೆಯಲ್ಲಿಡಲು ರಿಜಿಸ್ಟ್ರಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ 23 ಕ್ಕೆ ಮುಂದೂಡಿತು.