ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್ಗಾಗಿ ಸಿಸಿಬಿ ಶೋಧ ನಡೆಸಿದೆ.
ನಿನ್ನೆ ನ್ಯಾಯಾಲಯಕ್ಕೆ 400 ಪುಟದಲ್ಲಿ 60 ಆರೋಪಿಗಳ ಹೆಸರನ್ನು ನಮೂದಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಅದರಲ್ಲಿ ಜಾಕಿರ್ ಹುಸೇನ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಪ್ರಮುಖವಾಗಿದೆ. ಇಬ್ಬರು ಆರೋಪಿಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಸಂಪತ್ ರಾಜ್ ಕೊರೊನಾ ಸೋಂಕು ಹಾಗೂ ಬೆನ್ನುನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಜಾಕೀರ್ ಹುಸೇನ್, ಸಂಪತ್ಗೆ ನೋಟಿಸ್ ನೀಡಿದ ತಕ್ಷಣ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿಸಿಬಿ ಪೊಲೀಸರಿಗೆ ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿರುದ್ಧ ಕಾಂಗ್ರೆಸ್ಸಿಗರ ರಾಜಕೀಯ ದ್ವೇಷ ಪ್ರಮುಖ ಕಾರಣವಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ಹಾಗೂ ಜಾಕೀರ್ ವಿಚಾರಣೆ ಅಗತ್ಯವಾಗಿದೆ. ಹೀಗಾಗಿ ಇಬ್ಬರನ್ನ ಬಂಧಿಸಲು ಸಿಸಿಬಿ ಸದ್ಯ ತಂಡ ರಚನೆ ಮಾಡಿದೆ.
ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಒಂದು ತಂಡ ತೆರಳಿ ಆರೋಗ್ಯ ಸಮಸ್ಯೆ ಇದೆಯಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದೆ. ಹಾಗೆಯೇ ಜಾಕೀರ್ ಹುಸೇನ್ ಸದ್ಯ ಎಲ್ಲಿದ್ದಾರೆ ಅನ್ನುವ ಮಾಹಿತಿ ಇರದೆ ಇರುವುದರಿಂದ ಅವರ ಸ್ನೇಹಿತರ ಮನೆ ಹಾಗೂ ಕುಟುಂಬಸ್ಥರ ಮನೆ ಶೋಧ ನಡೆಸಿದ್ದಾರೆ.