ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಸಿಸಿಬಿಯ ಕಂಟಕ ಎದುರಾಗಿದೆ.
ಡಿ.ಜೆ. ಹಳ್ಳಿ ಪ್ರಕರಣದ ಶಾಸಕ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವುದಕ್ಕೆ ಪಕ್ಕಾ ಸಾಕ್ಷ್ಯಗಳು ದೊರೆತಿವೆ. ಹೀಗಾಗಿ ಬಂಧಿಸಲು ಪ್ಲಾನ್ ಮಾಡಿದ್ದು, ಕೊರೊನಾ ಪಾಸಿಟಿವ್ ಇರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೆ ಇದೇ ತಿಂಗಳ 5ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಕಾರಣ 6ನೇ ತಾರೀಖಿನಂದು ವಿಚಾರಣೆಗೆ ಕರೆದು ಬಂಧಿಸಲು ಎಲ್ಲಾ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಮತ್ತೊಂದೆಡೆ ಮಾಜಿ ಮೇಯರ್ ಸಂಪತ್ ರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಆಪ್ತರಾಗಿದ್ದಾರೆ. ಹಾಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಆಪ್ತರಾಗಿದ್ದು, ಇಬ್ಬರನ್ನ ಮುಂದೆ ಬಿಟ್ಟು ಅಖಂಡ ಶ್ರೀನಿವಾಸ್ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಮಾಜಿ ಮೇಯರ್. ಆದರೆ ಸಿಸಿಬಿ ಈ ಪ್ರಕರಣವನ್ನ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಾಗೆ ಪಕ್ಕಾ ಸಾಕ್ಷ್ಯಗಳನ್ನ ಕೂಡ ಕಲೆಹಾಕಿರುವ ಕಾರಣ ಲಾಕ್ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಸಿಸಿಬಿ ಅಧಿಕಾರಿವೊಬ್ಬರು ಮಾತನಾಡಿದ್ದು, ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತ ಘಟನೆ ಅದಾಗಿದೆ. ಸಮಾಜ ಕಾಯುವ ಠಾಣೆಯನ್ನ ಸುಟ್ಟ ಹಾಕಿದ್ದಾರೆ. ಘಟನೆ ನಡೆದಾಗ ಪೊಲೀಸರೇ ಭಯಭೀತರಾಗಿ ಪರಿಸ್ಥಿತಿ ನಿಭಾಯಿಸುವಲ್ಲಿ ಕೊಂಚ ವಿಫಲವಾಗಿದ್ದೇವೆ. ಹಾಗೆ ಪ್ರಾಣ ಲೆಕ್ಕಿಸದೆ ಆರೋಪಿಗಳನ್ನ ಮಟ್ಟ ಹಾಕಿದ್ದು ತನಿಖೆಗೆ ಎಷ್ಟೋ ಒತ್ತಡ ಬಂದರು ಮಣಿಯಲ್ಲ ಎಂದಿದ್ದಾರೆ.
ಹಾಗೆ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ದ ಬಹಳ ಸಾಕ್ಷ್ಯಗಳು ಕೂಡ ಇದೆ. ಹಾಗೆ ಬಂಧಿತ ಆರೋಪಿ ಪಿ ಎ ಅರುಣ್ ಕೆಲ ಮಾಹಿತಿ ಬಿಚ್ಚಿಟ್ಟಿದ್ದಾನೆ. ಅಷ್ಟು ಮಾತ್ರವಲ್ಲದೇ ಗಲಭೆ ನಡೆಯುವ ದಿನ ಮಾಜಿ ಮೇಯರ್ ಆರೋಪಿಗಳು ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಸೇರಿಕೊಂಡು ಮಾತುಕತೆ ಕೂಡ ನಡೆಸಿದ್ದಾರೆ. ಹಾಗೆ ಎಫ್ ಎಸ್ ಎಲ್ ಗೆ ರವಾನೆ ಮಾಡಿರುವ ಐಫೋನ್ ಮೊಬೈಲ್ ಕೂಡ ರಿಟ್ರೀವ್ ಆಗಿದೆ. ಈ ಎಲ್ಲಾ ಸಾಕ್ಷ್ಯಗಳನ್ನ ಪರಿಶೀಲನೆ ಮಾಡಿದಾಗ ಮಾಜಿ ಮೇಯರ್ ರಾಜಕೀಯ ದ್ವೇಷದ ಕಾರಣ ಗಲಭೆಗೆ ಕುಮ್ಮಕ್ಕು ನೀಡಿರುವುದು ಸ್ಪಷ್ಟವಾಗಿದೆ. ಸದ್ಯ ಇದೆಲ್ಲಾ ಕಾರಣ ಮುಂದಿಟ್ಟುಕೊಂಡು ಸಿಸಿಬಿ ಖೆಡ್ಡಾಕ್ಕೆ ಕೆಡವಲು ಮುಂದಾಗಿದೆ.
ಸಿಸಿಬಿಯಿಂದ ಬಂಧನವಾದರೆ ಮತ್ತೊಂದು ಕಂಟಕ: ಸದ್ಯ ಡಿ.ಜೆ ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್ ಡಿ.ಪಿ ಐ ಹಾಗೂ ಭಯೋತ್ಪಾದಕರ ಲಿಂಕ್ ಇರುವ ಶಂಕೆ ಇರುವ ಎನ್.ಐ.ಎ ತನಿಖೆಗೆ ಇಳಿದಿದೆ. ಹಾಗೆ ಕಳೆದ ನಾಲ್ಕು ದಿನಗಳ ಹಿಂದೆ 30 ಕ್ಕೂ ಹೆಚ್ವು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಒಂದು ವೇಳೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನ ಬಂಧಿಸಿದ್ರೆ ಎನ್ ಐ ಎ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.
ಏನಿದು ಪ್ರಕರಣ : ಆಗಸ್ಟ್ 11ರಂದು ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಎಂಬಾತ ಒಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ. ಇದರಿಂದ ರೊಚ್ಚಿಗೆದ್ದ ಆ ಧರ್ಮಿಯರು ಶಾಸಕ ಶ್ರಿನಿವಾಸ್ ಮೂರ್ತಿ, ಡಿ.ಜೆ ಹಳ್ಳಿ ಠಾಣೆ ಹಾಗೂ ಸ್ಥಳೀಯ ಅಂಗಡಿಗಳು, ಆರೋಪಿ ನವೀನ್ ಮನೆಯನ್ನು ಸುಟ್ಟು ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಪೊಲೀಸರಿಗೆ ಇದರಲ್ಲಿ ರಾಜಕೀಯ ದ್ವೇಷ ಇರುವುದು ಬಯಲಾಗಿತ್ತು. ಹೀಗಾಗಿ ಸದ್ಯ ಸಿಸಿಬಿ ಪೊಲೀಸರು ರಾಜಕೀಯ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ.