ಬೆಂಗಳೂರು: ಶಾಸಕರ ಮನೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಸಿಲುಕಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರ ಪಿಎ ಅರುಣ್ನನ್ನ ಗಲಭೆ ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿ ಮಾಡಲು ಸಿಸಿಬಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನ ಅಧಿಕೃತವಾಗಿ ತನಿಖೆ ನಡೆಸುತ್ತಿರುವ ಸಿಸಿಬಿ ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಪಿಎ ಅರುಣ್ನನ್ನ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಅರುಣ್ ಗಲಭೆ ಕೊರರಿಗೆ ಕುಮ್ಮಕ್ಕು ನೀಡಿರುವುದು, ಹಣ ಹಂಚಿರುವುದು ಹಾಗೆ ಘಟನೆಗೆ ಮುಂಚೆ ಗಲಭೆಕೋರರ ಜೊತೆ ಮಾತುಕತೆ ನಡೆಸಿರುವುದು ಸಾಬೀತಾಗಿದೆ.
ಸದ್ಯ ಅರುಣ್ ವಿಚಾರಣೆ ಮುಗಿದಿದ್ದು, ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನವೀನ್ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದು, ಇಬ್ಬರಿಗೂ ಪ್ರತ್ಯೇಕವಾದ ಬ್ಯಾರಕ್ಗಳ ವ್ಯವಸ್ಥೆ ಮಾಡಲಾಗಿದೆ. ಸಿಸಿಬಿ ಅಧಿಕಾರಿಗಳು ಗಲಭೆಗೆ ಸಂಬಂಧಿಸಿದಂತೆ ಅರುಣ್ ಬಳಿಯಿಂದ ಸಾಕಷ್ಟು ಮಾಹಿತಿ ಪಡೆದಿದ್ದಾರೆ.
ಅರುಣ್ ಬಳಿ ಇದ್ದ ಮೊಬೈಲ್ ಅನ್ನು ಎಫ್ಎಸ್ಎಲ್ ರಿಟ್ರೀವ್ಗೆ ಕಳುಹಿಸಿದ ಕಾರಣ ಟೆಕ್ನಿಕಲ್ ಆಧಾರದ ಮೇಲೆ ಮತ್ತಷ್ಟು ತನಿಖೆ ನಡೆಯಲಿದೆ. ಅಲ್ಲಿಯವರೆಗೆ ಅರುಣ್ ಜೈಲಿನಲ್ಲಿ ಇರಲಿದ್ದು, ಈತನ ಹೇಳಿಕೆ ಹಾಗೂ ಸಾಕ್ಷಗಳ ಆಧಾರದ ಮೆರೆಗೆ ಮಾಜಿ ಮೆಯರ್ ಸಂಪತ್ ರಾಜ್ ಹಾಗೂ ಕಾರ್ಪೋರೇಟರ್ ಜಾಕೀರ್ ಹುಸೇನ್ನನ್ನ ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದೆ. ಮತ್ತೊಂದೆಡೆ ಡಿ.ಜೆ ಹಳ್ಳಿ ಠಾಣೆ ಯಲ್ಲಿ ಎಫ್ಐಆರ್ ಆಧಾರದ ಮೇರೆಗೆ ತನಿಖೆ ಮುಂದುವರೆದಿದೆ.