ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರನನ್ನ ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಾರ್ಪ್ ಶೂಟರ್ ಯೂಸುಫ್ ಬಚಾ ಖಾನ್ ಬಂಧಿತ ಆರೋಪಿ. ಈತ ಈ ಹಿಂದೆ ಛೋಟಾ ರಾಜನ್ ಸಹಚರನಾಗಿದ್ದ. ಆದರೆ ಛೋಟಾ ರಾಜನ್ನ ಬಳಗದಿಂದ ಹೊರ ಬಂದ ನಂತರ ರವಿ ಪೂಜಾರಿ ಜೊತೆ ಸೇರಿಕೊಂಡು ನಗರದಲ್ಲಿ ನಡೆದ ಬಿಲ್ಡರ್ ಸುಬ್ಬರಾಜ್ ಕೊಲೆ ಪ್ರಕರಣದಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದ. ಈ ವಿಚಾರದಲ್ಲಿ ರವಿ ಪೂಜಾರಿಯನ್ನ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಯೂಸುಫ್ ಬಚಾ ಖಾನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಈತ ಶಾರ್ಪ್ ಶೂಟರ್ ಆಗಿದ್ದು, ಬಹುತೇಕ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ಬಂದಿದೆ. ಅಲ್ಲದೆ ಈತ ರವಿ ಪೂಜಾರಿ ಹೇಳಿದ ಕೆಲಸಗಳನ್ನ ಮಾಡುತ್ತಿದ್ದ. 2001ರಲ್ಲಿ ವೈಯಾಲಿಕಾವಲ್ನಲ್ಲಿ ನಡೆದ ಬಿಲ್ಡರ್ ಸುಬ್ಬರಾಜ್ ಕೊಲೆಯನ್ನ ರವಿ ಪೂಜಾರಿಯ ಸೂಚನೆ ಮೇರೆಗೆ ಖಾನ್ ಕೊಲೆ ಮಾಡಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಈಗಾಗ್ಲೇ 10 ದಿನಗಳ ಕಾಲ ಸಿಸಿಬಿ ಪೊಲೀಸರು ರವಿ ಪೂಜಾರಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಕೊರೊನಾ ಮಹಾಮಾರಿ ಇರುವ ಹಿನ್ನೆಲೆ ರವಿ ಪೂಜಾರಿ ಹಾಗೂ ಯೂಸುಫ್ ಬಚಾ ಖಾನ್ ಇಬ್ಬರನ್ನ ಸಿಸಿಬಿ ಅಧಿಕಾರಿಗಳು ಅತೀ ಜಾಗರೂಕತೆಯಿಂದ ವಿಚಾರಣೆ ನಡೆಸಲಿದ್ದಾರೆ. ಹಾಗಾಗಿ ಯಾವುದೇ ಆರೋಪಿಗಳನ್ನ ಹಿಡಿದು ವಿಚಾರಣೆ ನಡೆಸೋದು ಬೇಡ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ರು. ಆದರೆ ರವಿ ಪೂಜಾರಿ ಕೇಸ್ ಅತೀ ಪ್ರಮುಖವಾದ ಕಾರಣ ಬಹಳ ಜಾಗರೂಕತೆಯಿಂದ ತನಿಖೆ ನಡೆಸಲಿದ್ದಾರೆ.