ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಕುರಿತು ಮಾಹಿತಿ ನೀಡಿ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣ ಸಂಬಂಧ ನಡೆಯುತ್ತಿರುವ ವಿಚಾರಣೆ ನನಗೆ ಖುಷಿ ತಂದು ಕೊಟ್ಟಿಲ್ಲ. ವಿಚಾರಣೆ ನಡೆಯುತ್ತಿರುವ ರೀತಿ ನೋಡಿದರೆ ಕಾಣದ ಕೈಗಳು ಸಿಸಿಬಿ ಅಧಿಕಾರಿಗಳ ಕೈ ಕಟ್ಟಿ ಹಾಕಿರುವಂತೆ ತೋರುತ್ತಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ನಟಿಯರಷ್ಟೇ ಇಲ್ಲಾ ಪ್ರಭಾವಶಾಲಿ ನಟರು, ರಾಜಕಾರಣಿಗಳ ಮಕ್ಕಳು ಸಹ ಇದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬ ರಾಜಕಾರಣಿ ಈಗಾಗಲೇ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದು ಲವ್ ಜಿಹಾದ್ ಅಲ್ಲಾ, ದಯಮಾಡಿ ವಿಷಯವನ್ನ ಬೇರೆ ಕಡೆ ಡೈವರ್ಟ್ ಮಾಡಬೇಡಿ ಅಂತಾ ಸಿಸಿಬಿ ಅಧಿಕಾರಿಗಳಿಗೆ ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ.
ಇದೇ ವೇಳೆ ಅವರು, ಸಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇನ್ನು ವಿಪಕ್ಷಗಳ ಮೇಲೆ ಆರೋಪ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈ ಸಂಬಂಧ ವಿಪಕ್ಷ ನಾಯಕರು ಯಾರೂ ಕೇಳುತ್ತಿಲ್ಲ ಹಾಗಾಗಿ ವಿರೋಧ ಪಕ್ಷಗಳ ಮೇಲೆ ನನಗೆ ಅನುಮಾನ ಬರುತ್ತಿದೆ.
ಯಾಕೆ ಆದಿತ್ಯ ಆಳ್ವಾನನ್ನು ಇನ್ನೂ ಬಂಧಿಸಿಲ್ಲ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ನಿರ್ದೇಶಕರ ಮಗನೊಬ್ಬ ಕೂಡ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಎಂದು ಹೇಳಿ ಇಂದ್ರಜಿತ್ ಲಂಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಹಾಗೇ ಆತನನ್ನ ಕರೆತಂದು ವಿಚಾರಣೆ ನಡೆಸಿ ಮತ್ತು ಸಿಸಿಬಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಸದ್ಯ ವಿರೋಧ ಪಕ್ಷಗಳು ಕೇಳಬೇಕಾದ ಪ್ರಶ್ನೆಗಳನ್ನು ಮಾಧ್ಯಮದವರೇ ಕೇಳ್ತಿದ್ದಾರೆ. ಇದು ಸಣ್ಣ ಪುಟ್ಟ ಮಾಫಿಯಾ ಅಲ್ಲ. ರಾಜ್ಯ ಬಿಜೆಪಿ ನಾಯಕರು ಆರೋಪಿಗಳನ್ನು ಅರೆಸ್ಟ್ ಮಾಡಿ ಅಂತಾ ಎಂದು ಬಾಯಿಮಾತಿಗೆ ಹೇಳುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಯಾವುದರ ಬಗ್ಗೆಯೂ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಪ್ರಕರಣ ಸಂಬಂಧ ಸಿಬಿಐ ತನಿಖೆ ಆಗಬೇಕು. ಆಗ ಡ್ರಗ್ಸ್ ವಿಷಯಗಳು ಹೊರಗೆ ಬರುತ್ತವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.