ಬೆಂಗಳೂರು: ಗಾಂಜಾ ಮತ್ತು ಮದ್ಯ ನಶೆಯಲ್ಲಿ ಐದು ಕಾರುಗಳಿಗೆ ಬೆಂಕಿ ಹಚ್ಚಿ, ಪುಂಡಾಟ ಮೆರೆದ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಕೆಲ ವಿಷಯಗಳನ್ನು ಬಾಯಿಬಿಟ್ಟಿದ್ದು, ಈತನ ಹೇಳಿಕೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಬಸವೇಶ್ವರ ನಗರ ಪೊಲೀಸರ ವಶದಲ್ಲಿರುವ ರಾಜೇಂದ್ರ ಪ್ರಸಾದ್ನನ್ನು ತನಿಖೆ ವೇಳೆ ಯಾಕೆ ಈ ರೀತಿ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಪೊಲೀಸರು ನನ್ನ ಹಿಡಿದು ಬಂಧಿಸಲಿ ಅಂತಾನೇ ನಾ ಈ ಕೃತ್ಯ ಮಾಡಿರೋದು. ಪೊಲೀಸರು ನನ್ನ ಹಿಡಿದು ಹಲ್ಲೆ ಮಾಡಬೇಕು, ಚಿತ್ರಹಿಂಸೆ ನೀಡಿ ಸಾಯಿಸಬೇಕು. ನಾನು ಸಾಯಬೇಕು ಅಂತಾನೇ ಈ ಕೆಲಸ ಮಾಡಿದ್ದೇನೆ" ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಈತನ ಮಾತುಗಳನ್ನು ಕೇಳಿ ಅನುಮಾನಗೊಂಡಿರುವ ಪೊಲೀಸರು ವ್ಯಕ್ತಿಯ ಹಿನ್ನೆಲೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಈತ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಎಂಟು ವರ್ಷಗಳ ಹಿಂದೆ ಪತ್ನಿ ಈತನ ತೊರೆದು ಹೋಗಿದ್ದಳು ಎಂದು ತಿಳಿದುಬಂದಿದೆ. ಹೀಗಾಗಿ ಎರಡು ವರ್ಷದಿಂದ ಕೆಲಸ ಇಲ್ಲದೆ ಸುತ್ತಾಡಿ, ಕುಡಿದು ಸೈಕೊ ರೀತಿ ವರ್ತಿಸಿ ಈ ರೀತಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.