ಬೆಂಗಳೂರು: ಕಳ್ಳತನ ಮಾಡಿದ ಕಾರಿನ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ, ಚಾರ್ಸಿ ನಂಬರ್ ಬದಲಾಯಿಸಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿ ಖದೀಮರು ಉದ್ಯಮಿಗೆ ಕಾರು ಮಾರಾಟ ಮಾಡಿ ವಂಚಿಸಿದ್ದಾರೆ.
ನಗರದ ತಿಪ್ಪಸಂದ್ರ ನಿವಾಸಿ ಹರೀಶ್ ಎಂಬುವವರು ನೀಡಿದ ದೂರಿನನ್ವಯ ಸುರೇಶ್, ರಾಮ್, ವಿಶ್ವಾಸ್ ಎಂಬುವವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಮಾರ್ಚ್‌ನಲ್ಲಿ ಕಾರು ಮಾರುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಕಾರು ಖರೀದಿಸಲು ಯೋಚಿಸಿದ್ದ ಹರೀಶ್, ಒಎಲ್‌ಎಕ್ಸ್‌ನಲ್ಲಿನ ಜಾಹೀರಾತು ಗಮನಿಸಿ ವಿಶ್ವಾಸ್ ಎಂಬಾತನನ್ನು ಸಂಪರ್ಕಿಸಿದ್ದರು. ಬಳಿಕ ವರ್ತೂರು ಬಸ್ ನಿಲ್ದಾಣದಲ್ಲಿ ಮೂವರನ್ನು ಭೇಟಿಯಾಗಿದ್ದರು.
ಇದನ್ನು ಓದಿ: ಮದುವೆಗೆ ಒಲ್ಲೆ ಎಂದ ನಾದಿನಿಗೆ ಚಾಕು ಇರಿದ: ಅರೆಸ್ಟ್ ಆಗುವ ಭಯದಲ್ಲಿ ಆತ್ಮಹತ್ಯೆಗೆ ಶರಣಾದ..!
ಈ ವೇಳೆ, ಕಾರನ್ನು 4.25 ಲಕ್ಷ ರೂ.ಗೆ ಖರೀದಿಸಲು ಒಪ್ಪಿದ ಹರೀಶ್, 10 ಸಾವಿರ ರೂ. ಮುಂಗಡ ಹಣ ಕೊಟ್ಟಿದ್ದರು. ಮರುದಿನ 1.45 ಲಕ್ಷ ರೂ. ನಗದು ಹಾಗೂ ಇನ್ನುಳಿದ ಹಣವನ್ನು ಚೆಕ್ ರೂಪದಲ್ಲಿ ನೀಡಿ, ಕಾರು ಪಡೆದಿದ್ದರು. ಕಾರು ಮಾರಿದ ಖದೀಮರು ಕೆಲ ದಾಖಲಾತಿಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ್ದರು. ಇದಾದ ಕೆಲ ದಿನಗಳ ನಂತರ ಹರೀಶ್, ಅಸಲು ದಾಖಲಾತಿಗಳನ್ನು ಕೇಳಲು ಕರೆ ಮಾಡಿದ್ದಾರೆ. ಆದ್ರೆ ಆ ಮೂವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಕಾರಿನ ಆರ್.ಸಿ. ಬುಕ್‌ನಲ್ಲಿದ್ದ ವಿಳಾಸಕ್ಕೆ ಹೋಗಿ ವಿಚಾರಿಸಿದ ಸಂದರ್ಭ ಕಾರಿನ ಮಾಲೀಕ ಬೇರೆ ಎಂಬುದು ಗೊತ್ತಾಗಿದೆ. ಬಳಿಕ ಕಾರಿನ ಚಾರ್ಸಿ ನಂಬರ್, ನೋಂದಣಿ ಸಂಖ್ಯೆ ಹಾಗೂ ಇಂಜಿನ್ ನಂಬರ್ ಕೂಡ ಬೇರೆ ಇರುವುದು ಕಂಡುಬಂದಿದೆ. ವಂಚನೆಗೊಳಗಾದ ಹರೀಶ್ ಆರೋಪಿಗಳ ವಿರುದ್ಧ ದೂರು ಕೊಟ್ಟಿದ್ದಾರೆ.