ಬೆಂಗಳೂರು: 2 ಲಕ್ಷ ಹಣ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ಪೊಲೀಸರು ಬೆದರಿಸಿದ್ದಾರೆ. ಅಲ್ಲದೇ ಠಾಣೆಯಲ್ಲೇ ತನ್ನ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ವ್ಯಕ್ತಿವೋರ್ವ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಗಿರಿನಗರ ನಿವಾಸಿ ಕರಣ್ ಕುಮಾರ್ ನೀಡಿದ ದೂರಿನ ಆಧಾರದ ಮೇರೆಗೆ ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ)ಗಳಾದ ಅಜಿತ್, ಕೆಂಪಣ್ಣ, ಸಿಟಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಹೋಟೆಲ್‌ವೊಂದರ ಸಿಬ್ಬಂದಿ ಶಂಕರ್, ಹೋಟೆಲ್ ಮ್ಯಾನೇಜರ್ ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕರಣ್ ಕುಮಾರ್ ಕೆಲಸದ ಸಲುವಾಗಿ ದಾವಣಗೆರೆಗೆ ಹೋಗಿದ್ದು, ಜ.13ರಂದು ರೈಲಿನಲ್ಲಿ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ರೈಲ್ವೆ ನಿಲ್ದಾಣದಲ್ಲಿ ಪಕ್ಕದಲ್ಲಿದ್ದ ಪರಿಚಿತ ಹೋಟೆಲ್ ಸಿಬ್ಬಂದಿ ಶಂಕರ್ನನ್ನು ಮಾತನಾಡಿಸಿದ್ದರು. ಯಾವುದೋ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಕೂಡಲೇ ಶಂಕರ್ ಜಿಆರ್‌ಪಿ ಪೊಲೀಸರಾದ ಅಜಿತ್, ಕೆಂಪಣ್ಣ ಅವರನ್ನು ಕರೆಸಿದ್ದ. ಸ್ಥಳಕ್ಕೆ ಬಂದ ಪೊಲೀಸರು 5ನೇ ಫ್ಲ್ಯಾಟ್ ಫಾರಂಗೆ ಕರೆದುಕೊಂಡು ಹೋಗಿ ಮೊಬೈಲ್, ಬ್ಯಾಗನ್ನು ಕಸಿದುಕೊಂಡಿದ್ದರು. ನಂತರ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. 2 ಲಕ್ಷ ರೂ. ಹಣ ತಂದು ಕೊಡಬೇಕು. ಇಲ್ಲದಿದ್ದರೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಠಾಣೆಯಲ್ಲಿ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕರಣ್ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ನನ್ನ ಮೊಬೈಲ್‌ನಿಂದ ಬಲವಂತವಾಗಿ ಪರಿಚಿತ ಉಮೇಶ್ ಎಂಬುವರಿಗೆ ಕರೆ ಮಾಡಿಸಿ ಮುಂಬೈನಿಂದ ಯುವತಿಯರನ್ನು ನಗರಕ್ಕೆ ಕರೆಸಿಕೊಳ್ಳುವಾಗ ಸಿಕ್ಕಿ ಬಿದ್ದಿದ್ದೇನೆ. ಕೂಡಲೇ 2 ಲಕ್ಷ ರೂಪಾಯಿ ತಂದರೆ ನನ್ನನ್ನು ಬಿಡುತ್ತಾರೆ. ಕೋರಮಂಗಲದ ಬಳಿ ಹಣ ತರುವಂತೆ ಪೊಲೀಸರೇ ಬಲವಂತವಾಗಿ ನನ್ನಲ್ಲಿ ಹೇಳಿಸಿದ್ದರು. ನಂತರ ಖಾಸಗಿ ವ್ಯಕ್ತಿಯೊಬ್ಬರ ವಾಹನದಲ್ಲಿ ಕೋರಮಂಗಲಕ್ಕೆ ಕರೆದೊಯ್ದು ಹೋಟೆಲ್‌ವೊಂದರ ಪಕ್ಕದಲ್ಲಿ ವಾಹನ ನಿಲ್ಲಿಸಿ ಉಮೇಶ್ ಕೈನಿಂದ ಹಣ ತರುವಂತೆ ಬೆದರಿಸಿದ್ದರಂತೆ.
ತನ್ನ ಬಳಿ ಅಷ್ಟೊಂದು ಹಣವಿಲ್ಲ. ನಂತರ ಕೊಡುವುದಾಗಿ ಉಮೇಶ್ ಮನವಿ ಮಾಡಿದ್ದರಂತೆ. ನಂತರ ನನ್ನ ಮೊಬೈಲ್ ತಗೆದುಕೊಂಡು ಪೊಲೀಸರು ಅಲ್ಲಿಂದ ಹೋಗಿದ್ದಾರೆ ಎಂದು ಕರಣ್ ಆರೋಪಿಸಿದ್ದಾರೆ.