ಬೆಂಗಳೂರು: ವೈದ್ಯಕೀಯ ಚಿಕಿತ್ಸೆ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಪೂರ್ಣ ಮಾಹಿತಿ ಹೊಂದಿರುವ ರೋಗಿಗಳಿಂದಾಗಿ ಇಂದು ವೈದ್ಯರುಗಳು ಹೆಚ್ಚು ಒತ್ತಡಕ್ಕೆ ಸಿಲುಕಿದ್ದಾರೆ. ರೋಗಿಗಳಿಗಿಂತಲೂ ಹೆಚ್ಚು ಒತ್ತಡದಲ್ಲಿ ವೈದ್ಯರುಗಳು ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒತ್ತಡದಿಂದಾಗಿ ಹೆಚ್ಚಿನ ಸಂಖ್ಯೆಯ ವೈದ್ಯರುಗಳು ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಹೃದಯರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ.
ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಮಸ್ತ ವೈದ್ಯರುಗಳಿಗೆ ಶುಭಾಶಯ ಕೋರಿ ವೈದ್ಯರ ಒತ್ತಡದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಗಳಿಗೆ ಬರುವ ರೋಗಿಗೆ ಯಾವ ಖಾಯಿಲೆಗೆ ಯಾವ ಚಿಕಿತ್ಸೆ ನೀಡಬೇಕೆನ್ನುವುದು ವೈದ್ಯರಿಗೆ ತಿಳಿದಿರುತ್ತದೆ. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವ ಮುನ್ನವೇ ಅಪೂರ್ಣ ಮಾಹಿತಿ ತಿಳಿದಿರುವ ರೋಗಿಗಳು, ಅವರ ಸಂಬಂಧಿಕರು, ಸ್ನೇಹಿತರು ಇಂತಹದೇ ಚಿಕಿತ್ಸೆ ನೀಡಿ ಎಂದು ಒತ್ತಡ ಹಾಕುತ್ತಾರೆ. ಇದರಿಂದ ವೈದ್ಯರಿಗೆ ಹೆಚ್ಚಿನ ಗೊಂದಲ ಉಂಟಾಗುತ್ತದೆ ಎಂದು ಹೇಳಿದರು.
ಒತ್ತಡದಿಂದಾಗಿ ವೈದ್ಯರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವುದನ್ನೇ ತಮ್ಮ ಧ್ಯೇಯವಾಗಿಟ್ಟುಕೊಂಡ ವೈದ್ಯರುಗಳು ಇಂದು ತಮ್ಮ ಅನಾರೋಗಕ್ಕೆ ಚಿಕಿತ್ಸೆ ಪಡೆಯುವುದನ್ನು ನಿರ್ಲಕ್ಷಿಸಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾರೂ ಒತ್ತಡ ಹಾಕಬಾರದು: ರೋಗಿಗಳ ಜೀವ ಕಾಪಾಡುವ ವೈದ್ಯರ ಮೇಲೆ ಯಾರೂ ಒತ್ತಡ ಹಾಕಬಾರದು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಲವಾರು ಕಾರಣಗಳಿಂದ ಹೆಚ್ಚು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮೇಲಿನ ಒತ್ತಡ ಕಡಿಮೆಯಾಗಬೇಕು. ಚಿಕಿತ್ಸೆ ಫಲಕಾರಿಯಾಗದ ಸಂದರ್ಭದಲ್ಲಿ ರೋಗಿಗಳ ಕಡೆಯವರು ವೈದ್ಯರ ಮೇಲೆ ಹಲ್ಲೆ ನಡೆಸಬಾರದು ಎಂದು ಮನವಿ ಮಾಡಿದರು.
ಇನ್ನೂ ವೈದ್ಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಾರದಲ್ಲಿ ಒಂದು ದಿನವಾದರೂ ತಮ್ಮ ವಿಶ್ರಾಂತಿಗೆ, ತಮ್ಮ ಕುಟುಂಬಕ್ಕಾಗಿ ಮೀಸಲಿಡಬೇಕು. ಆರೋಗ್ಯ ತೊಂದರೆಗಳಿದ್ದಾಗ ವಿಳಂಬ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗಿಗಳ ಜೀವ ಕಾಪಾಡುವ ವೈದ್ಯರ ಜೀವವೂ ಬಹಳ ಅಮೂಲ್ಯವಾಗಿದೆ ಎಂದು ವೈದ್ಯರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಆರೋಪ : ಪೊಲೀಸ್ ಕಾನ್ಸ್ಟೇಬಲ್ ಬಂಧನ
ವೈದ್ಯರು ಚಿಕಿತ್ಸೆ ನೀಡುವಾಗ ಜವಾಬ್ದಾರಿ ಮರೆಯಬಾರದು. ಅಗತ್ಯಕ್ಕಿಂತ ಹೆಚ್ಚಿನ ಶುಲ್ಕ ತಗೆದುಕೊಳ್ಳಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ಮಧ್ಯಮ ವರ್ಗಕ್ಕೆ ಕೈಗೆಟುಕುವಂತಹ ಶುಲ್ಕದ ಮಾದರಿ ನಿಗದಿಪಡಿಸಬೇಕು. ರೋಗಿ ಬದುಕುವ ಸಾಧ್ಯತೆ ಬಗ್ಗೆ ಖಚಿತವಾದಾಗ ಅನಗತ್ಯವಾಗಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಇಟ್ಟುಕೊಳ್ಳಬಾರದು ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.