ಬೆಂಗಳೂರು : ರಾಜ್ಯ ಸರ್ಕಾರವು ಐದು ಚುನಾವಣಾ ಭರವಸೆಗಳ ಅನುಷ್ಠಾನ ಮಾಡಿರುವುದರಿಂದ ಆರ್ಥಿಕ ಅಡಚಣೆ ಉಂಟಾಗಿದೆ. ಹಾಗಾಗಿ, ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದೇ ವೇಳೆ, ಅನುದಾನ ಮತ್ತು ಅಭಿವೃದ್ಧಿ ವಿಚಾರವಾಗಿ ಕೆಲವು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, "ಭಾರಿ ನಿರೀಕ್ಷೆಗಳನ್ನು ಹೊಂದಿರುವ ಪಕ್ಷದ ಶಾಸಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಳ್ಮೆಯಿಂದ ಇರಬೇಕು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಉಚಿತ ಗ್ಯಾರಂಟಿಗಳನ್ನು ಈಡೇರಿಸಲು ಹಣಕಾಸಿನ ಅಡಚಣೆಯಾಗುವುದನ್ನು ಅರಿತುಕೊಳ್ಳಬೇಕು" ಎಂದು ತಮ್ಮ ಪಕ್ಷದ ಅಸಮಾಧಾನಿತ ಶಾಸಕರನ್ನು ಉದ್ದೇಶಿಸಿ ಹೇಳಿಕೆ ನೀಡಿದರು.
ಇದನ್ನೂ ಓದಿ : ನಾಳೆ ಶಾಸಕಾಂಗ ಪಕ್ಷದ ಸಭೆ.. ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಶಾಸಕರಿಂದ ಪ್ರಶ್ನೆಗಳ ಸುರಿಮಳೆ ಸಾಧ್ಯತೆ!
"ನಾವು ಕೂಡ ಕೆಲವು ಹಣಕಾಸಿನ ವಿಷಯಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಲು ಬಯಸುತ್ತೇವೆ. ಗುರುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಅವರಿಗೆ ಸರ್ಕಾರದ ಪರಿಸ್ಥಿತಿ ಕುರಿತು ವಿವರಿಸಲಾಗುವುದು. ಏಕೆಂದರೆ, ನಾವು 40,000 ಕೋಟಿ ರೂಪಾಯಿಗಳನ್ನು ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಮೀಸಲಿಡಬೇಕಾಗುತ್ತದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ" ಎಂದು ಆರೋಪಗಳನ್ನು ತಳ್ಳಿ ಹಾಕಿದರು.
ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರ ಹಿಡಿದು 2 ತಿಂಗಳಾಗಿಲ್ಲ, ಆಗಲೇ ಸ್ವಪಕ್ಷೀಯರಿಂದ ಅಪಸ್ವರ : ಜಿ.ಟಿ ದೇವೇಗೌಡ ಟೀಕೆ
"ಈ ವರ್ಷ ಅಭಿವೃದ್ಧಿ ಮಾಡಲು ಆಗುವುದಿಲ್ಲ, ನೀರಾವರಿ ಇಲಾಖೆ ಅಥವಾ ಪಿಡಬ್ಲ್ಯುಡಿ ಇಲಾಖೆಗೆ ಅನುದಾನ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಶಾಸಕರಿಂದ ಭಾರಿ ನಿರೀಕ್ಷೆಯಿದೆ, ನಾವು ಅವರಿಗೆ ಕಾಯುವಂತೆ ಕೇಳಿದ್ದೇವೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಹಿಂದಿನ ಸರ್ಕಾರ ದಿವಾಳಿತನ ಸೃಷ್ಟಿಸಿ, ಹೆಚ್ಚಿನ ಟೆಂಡರ್ ಕರೆದು ಖಜಾನೆ ಖಾಲಿ ಮಾಡಿತ್ತು. ನಾವು ಮೊದಲ ವರ್ಷದಲ್ಲಿಯೇ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಖಚಿತ" ಎಂದರು.
ಇದನ್ನೂ ಓದಿ : D K Shivakumar case: ಪ್ರಾಥಮಿಕ ತನಿಖೆ 3 ತಿಂಗಳಲ್ಲಿ ಮುಗೀಬೇಕು, 7 ತಿಂಗಳು ನಡೆಸಲಾಗಿದೆ: ಡಿ.ಕೆ.ಶಿವಕುಮಾರ್ ಪರ ವಕೀಲರ ವಾದ
ಮಳೆಯ ನಡುವೆಯೂ ಡಿಸಿಎಂ ಡಿಕೆಶಿ ಅವರು ಬುಧವಾರ ಸರ್ವಜ್ಞ ನಗರ ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ, ಮೇಲ್ಸೇತುವೆ ನಿರ್ಮಾಣದ ಪರಿಶೀಲನೆ ಮಾಡಿದರು. ಕೆರೆ ಜಾಗದಲ್ಲಿ ಪಾರ್ಕ್ ನಿರ್ಮಾಣದ ಬಗ್ಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿಂದೆ ಮಂಜೂರಾಗಿದ್ದ ಕಾಮಗಾರಿಗಳನ್ನು ಕಳೆದ ಸರ್ಕಾರ ರದ್ದು ಮಾಡಿತ್ತು. ಈಗ ಮತ್ತೆ ಸರ್ಕಾರಿ ಆಸ್ತಿ ಉಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ತೀರ್ಮಾನ ಮಾಡುವ ಮುನ್ನ ನಾನು ಹಾಗೂ ಸಚಿವರು ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇವೆ. ಬಿಡಿಎ, ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ದಾಖಲೆ ಪರಿಶೀಲನೆ ಮಾಡಲಾಗಿದೆ.. ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಅಭಿವೃದ್ಧಿ ಮತ್ತು ಅನುದಾನದ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ಶಾಸಕರು ಪತ್ರ ಬರೆದ ಹಿನ್ನೆಲೆಯಲ್ಲಿ ಇಂದು ನಾಲ್ಕು ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.