ಬೆಂಗಳೂರು: ವಿಧಾನಸಭಾ ಉಪಚುನಾವಣೆ ಕಾವು ಹೆಚ್ಚುತ್ತಿದೆ. ಏನಾದರೂ ಮಾಡಿ, ಈ ಉಪಚುನಾವಣೆ ಗೆದ್ದರೆ ಸಾಕು ಅಂತ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಸಮಯವನ್ನೂ ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ. ಇಂದೂ ಕೂಡಾ ಮೂರು ಪಕ್ಷದ ಅಭ್ಯರ್ಥಿಗಳು ಬೆಳಗ್ಗೆ 6 ಗಂಟೆಯಿಂದಲ್ಲೇ ಮತಪ್ರಚಾರದಲ್ಲಿ ತೊಡಗಿದ್ರು.
ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ, ನಟಿ ತಾರಾ ಚುನಾವಣಾ ಪ್ರಚಾರದಲ್ಲಿ ತೊಡಗಿದರು. ನಂದಿನಿ ಲೇಔಟ್ನ ನಾನಾ ವಾರ್ಡ್ಗಳಿಗೆ ತೆರಳಿ, ಗೋಪಾಲಯ್ಯಗೆ ಮತ ಹಾಕುವಂತೆ ಪ್ರಚಾರ ಮಾಡಿದರು. ಇನ್ನು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ ನಾಶಿ ಕೂಡ ವಿವಿಧ ವಾರ್ಡ್ಗಳಿಗೆ ತೆರಳಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು, ಮಹಾಲಕ್ಷ್ಮೀಪುರಂ ವಾರ್ಡ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ. ಕಮಲಮ್ಮನಗುಂಡಿಯಿಂದ ಮತಯಾಚನೆ ಮಾಡಿದ್ರು.
ಇನ್ನು ನಾಮಪತ್ರ ವಾಪಾಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಹದಿಮೂರು ಅಭ್ಯರ್ಥಿಗಳ ಪೈಕಿ, ಒಬ್ಬ ಪಕ್ಷೇತರರ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಡಾ. ರಾಜಣ್ಣ ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಹನ್ನೆರೆಡು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಕಾಂಗ್ರೆಸ್ನಿಂದ ಎಮ್. ಶಿವರಾಜ್, ಜೆಡಿಎಸ್ನಿಂದ- ಡಾ. ಗಿರೀಶ್.ಕೆ ನಾಶಿ, ಬಿಜೆಪಿಯಿಂದ - ಗೋಪಾಲಯ್ಯ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ - ವಾಟಾಳ್ ನಾಗರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ- ಆಶಾರಾಣಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ- ಪಿ. ಗಿರೀಶ್, ಜೈ ವಿಜಯ ಭಾರತಿ ಪಕ್ಷದಿಂದ- ನಾರಾಯಣ ಸ್ವಾಮಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಕಣದಲ್ಲಿದ್ದಾರೆ.