ಬೆಂಗಳೂರು : ರಾಜ್ಯಸಭೆಗೆ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಗೆ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಪಕ್ಷದಲ್ಲಿ ಈ ಬಗ್ಗೆ ತೀರ್ಮಾನ ಮಾಡಿದ್ದೇವೆ. ಆದರೆ, ಈ ಬಗ್ಗೆ ಯಾವ ಪಕ್ಷದ ನಾಯಕರೂ ನಮ್ಮ ಬೆಂಬಲ ಕೇಳಿಲ್ಲ. ಬೇರೆ ಪಕ್ಷಗಳು ಏನು ತೀರ್ಮಾನ ಮಾಡುತ್ತವೆ ಕಾದು ನೋಡೋಣ. ಇನ್ನು ಯಾರು ಅಭ್ಯರ್ಥಿ ಎಂಬ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಗರಂ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ನಮ್ಮ ಬಗ್ಗೆ ಢೋಂಗಿ ಜಾತ್ಯಾತೀತ ಪಕ್ಷವೆಂದು ಟೀಕಿಸುತ್ತಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿರುವ ಇವರು ಯಾವ ಜಾತ್ಯಾತೀತತೆ ಉಳಿಸಿಕೊಂಡಿದ್ದಾರೆ ಎಂದು ಅಣಕಿಸುತ್ತಾರೆ. ಈಗಲೂ ನಮ್ಮ ಪಕ್ಷದ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ.
ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಅಂದು ನಾವು ಬಿಜೆಪಿ ಜೊತೆ ಹೋಗಬೇಕಾಯಿತು. ಆದರೆ, ಸಿದ್ದರಾಮಯ್ಯನವರು ಜಾತಿ ಸಮಾವೇಶಗಳನ್ನು ಮಾಡುತ್ತಾರೆ. ಇವರೇನು ಜಾತ್ಯಾತೀತರಾ? ಎಂದು ಪ್ರಶ್ನಿಸಿದರು. ಗೋಹತ್ಯೆ ನಿಷೇಧ ಮಸೂದೆಗೆ ಅಂದಿನ ಕಾಂಗ್ರೆಸ್‌ನ ನಡವಳಿಕೆಯೇ ಪರೋಕ್ಷ ಸಹಕಾರ ನೀಡಿತು. ಸದನದಲ್ಲಿ ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರಗೊಳ್ಳುವಂತಾಯಿತು. ಇಬ್ರಾಹಿಂ ನಮ್ಮ ಪಕ್ಷಕ್ಕೆ ಬಂದ ಮೇಲೆ ಕಾಂಗ್ರೆಸ್ ಕುಸಿಯುತ್ತಿದೆ. ಇಬ್ರಾಹಿಂ ಕಾಲ್ಗುಣ ನಮ್ಮ ಪಕ್ಷಕ್ಕೆ ಬಲ ಬಂದಿದೆ ಎಂದರು.
ಜೆಡಿಎಸ್ ಸೇರುವವರ ಪರ್ವ ಶುರುವಾಗುತ್ತೆ: ಮುಂದಿನ ತಿಂಗಳಿಂದ ಜೆಡಿಎಸ್ ಪಕ್ಷ ಸೇರುವವರ ಪರ್ವ ಶುರುವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು. ವಾರ ವಾರ ಸುದ್ದಿಗೋಷ್ಠಿ ಮಾಡಿ ಪಕ್ಷ ಸೇರುವವರ ಹೆಸರು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಪಕ್ಷಕ್ಕೆ ಯಾರು ಬರುತ್ತಾರೆ ಎಂಬುದು ಗೊತ್ತಿಲ್ಲ. ಪಕ್ಷಕ್ಕೆ ಯಾರು ಬರುತ್ತಾರೆ, ಬಿಡುತ್ತಾರೆ ಎಂಬುದನ್ನು ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ಪಕ್ಷ ಸೇರಲು ಬೇರೆ ಪಕ್ಷಗಳ ನಾಯಕರು ಸಂಪರ್ಕದಲ್ಲಿ ಇದ್ದಾರೆ. ಆದರೆ, ಯಾರು ಬೇಕು, ಬೇಡ ಎಂಬುದನ್ನು ಇಬ್ರಾಹಿಂ ನಿರ್ಧರಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಓದಿ : ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕ ಬದಲಾಯಿಸುವುದು ಸರಿಯಲ್ಲ.. ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್