ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಮಾ.21 ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತಸುಬ್ಬರಾವ್ ಅವರು ತಿಳಿಸಿದರು. ಭಾನುವಾರ ಅನಂತಸುಬ್ಬರಾವ್ ಅವರು ಸೇರಿದಂತೆ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನೌಕರರ ವೇತನವನ್ನು ಶೇ.15ಕ್ಕೆ ಏರಿಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ವಿಮರ್ಶೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21 ರ ಬೆಳಗ್ಗೆ 6 ಗಂಟೆಯಿಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಕಟಿಸಿತ್ತು. 2023 ರ ಮಾರ್ಚ್ 8 ರಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಜೊತೆ ವೇತನ ಪರಿಷ್ಕರಣೆ ಕುರಿತು ಚರ್ಚಿಸಲಾಗಿದ್ದು, ಆದರೆ ಮೂಲ ವೇತನದ ಶೇ.10 ರಷ್ಟು ಹೆಚ್ಚಳದ ಭರವಸೆಗೆ ನಮ್ಮ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಸಭೆ ನಡೆಸುವ ಆಶ್ವಾಸನ ನೀಡಲಾಗಿತ್ತು. ಆದರೆ ಸರ್ಕಾರ ನಮ್ಮ ಬೇಡಿಕೆಗಳ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳ ಕಾಣುತ್ತಿಲ್ಲ. ಅಲ್ಲದೆ ಚುನಾವಣೆ ಆರಂಭದ ಹೊಸ್ತಿಲಿನಲ್ಲಿದ್ದೇವೆ. ಚುನಾವಣಾ ಆಯುಕ್ತರು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಚುನಾವಣೆಯ ಪ್ರಕಟಣೆಯಾದರೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳೆಲ್ಲಾ ಅನಿರ್ದಿಷ್ಟವಾಧಿಗೆ ನೆನೆಗುದಿಗೆ ಬೀಳಬಹುದೆಂಬ ಭೀತಿಯಲ್ಲಿದ್ದ ಸಾರಿಗೆ ನೌಕರರು ಆಕ್ರೋಶ ಹೊರಹಾಕಿ ಮುಷ್ಕರಕ್ಕೆ ಕರೆಕೊಟ್ಟಿದ್ದರು.
ಈ ವಿಚಾರವಾಗಿ ಮಾತನಾಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತಸುಬ್ಬರಾವ್ ಅವರು, ನೌಕರರ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಮೇರೆಗೆ ಮುಷ್ಕರ ವಾಪಸ್ ಪಡೆಯಲಾಗಿದೆ. ವೇತನ ಹೆಚ್ಚಳ ಹಾಗೂ ಭತ್ಯೆ ಸೇರಿದಂತೆ ಉಳಿದ ಎಲ್ಲ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಹಿಂದಿನ ಬಾಕಿ ಪಾವತಿ ಭರವಸೆ : ಪ್ರತಿ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಆದರೆ, ಕಳೆದ 3 ವರ್ಷಗಳಿಂದ ವೇತನ ಹೆಚ್ಚಳ ವಿಷಯ ನನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಶೇ.15 ರಷ್ಟು ವೇತನ ಹೆಚ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಹಿಂದಿನ ಬಾಕಿ ಪಾವತಿ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಿಕ್ಕಿದೆ ಎಂದು ಅನಂತಸುಬ್ಬರಾವ್ ಅವರು ಮಾಹಿತಿ ನೀಡಿದರು.
ಸರ್ಕಾರಿ ಸಾರಿಗೆ ನೌಕರರ ಬೇಡಿಕೆ ಏನಾಗಿತ್ತು? : ಮೂಲ ವೇತನಕ್ಕೆ ಬಿ.ಡಿ.ಎ. ವಿಲೀನಗೊಳಿಸಿ (Merge), ಪರಿಷ್ಕೃತ ಮೂಲ ವೇತನದ ಶೇ.25 ರಷ್ಟನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸತಕ್ಕದ್ದು. ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3 ಇರತಕ್ಕದ್ದು.
ಆಯ್ಕೆ ಶ್ರೇಣಿ ಹಾಗು ಉನ್ನತ ಶ್ರೇಣಿಗಳ ವೇತನ ಶ್ರೇಣಿಗೂ ಮೊದಲ ಬೇಡಿಕೆಯ ಅಂಶವನ್ನೇ ಪರಿಗಣಿಸಬೇಕು, ಆಯ್ಕೆ ಶ್ರೇಣಿ ಹಾಗು ಉನ್ನತ ಶ್ರೇಣಿಗಳ ವೇತನ ಶ್ರೇಣಿಗಳ ಇನ್ಕ್ರಿಮೆಂಟ್ ದರ ಪರಿಷ್ಕೃತ ಆಯ್ಕೆ ಶ್ರೇಣಿ ಹಾಗು ಉನ್ನತ ಶ್ರೇಣಿಗಳ ಮೂಲ ವೇತನದ ಶೇ.3 ಇರತಕ್ಕದ್ದು, ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ಒಮ್ಮೆ ನೀಡಬೇಕು.
ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೂ ಮತ್ತು ಇತರ ಎಲ್ಲಾ ನೌಕರರಿಗೂ ಹಾಲಿ ಇರುವ ಬಾಟಾ, ಮಾಸಿನ, ದೈನಂದಿನ ಭತ್ಯೆಗಳನ್ನು (ಕ್ಯಾಷ್, ರಿಪಾಸ್ಟ್, ಬಟ್ಟೆ ತೊಳೆಯುವ, ರಾತ್ರಿಪಾಳಿ, ಪ್ರೋತ್ಸಾಹ ಭತ್ಯೆ ಮತ್ತಿತರ ಭತ್ಯೆಗಳು)ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಷೂ, ಜರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೂ ಕ್ಯಾಷಿಯರ್ಗಳಿಗೆ ಸಮಾನವಾದ ಕ್ಯಾಷ್ ಅಲೋವೆನ್ಸ್ ನೀಡಬೇಕು.
ಏಪ್ರಿಲ್ 2021 ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರುನೇಮಕ ಮಾಡಬೇಕು. ಲೋಕ ಅದಾಲತ್‌ನಲ್ಲಿ ಷರತ್ತುಗಳನ್ನು ಒಪ್ಪಿ ಸೇವೆಗೆ ಮರುನೇಮಕಗೊಂಡಿರುವ ನೌಕರರಿಗೆ ಹಿಂದಿನ ದಿನಾಂಕದಿಂದ ಅನ್ವಯವಾಗುವಂತೆ ಷರತ್ತುಗಳನ್ನು ರದ್ದುಪಡಿಸಬೇಕು. ಮುಷ್ಕರದ ಸಂದರ್ಭದಲ್ಲಿ ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ/ ನೌಕರರನ್ನು ಮಾತೃ ಹಾಗು ಮೂಲ ಘಟಕಕ್ಕೆ ವಾಪಸ್ ತರತಕ್ಕದ್ದು. ಹಾಗೂ ಈ ಸಂದರ್ಭದಲ್ಲಿ ಎಫ್ಐಆರ್ ಆಗಿರುವ ಕಾರ್ಮಿಕರನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ಮತ್ತು ಎಫ್ಐಆರ್ ಗಳನ್ನು ಸರ್ಕಾರ ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.
ಇದನ್ನೂ ಓದಿ :ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸಲು ಆಗ್ರಹ: 18 ಲಕ್ಷ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ..