ಬೆಂಗಳೂರು: ನಗರದಲ್ಲಿ ರಾಜಕಾಲುವೆ ಜಾಗದ ಒತ್ತುವರಿ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿದೆ. ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ಮತ್ತು ಕೆರೆ ಜಾಗದ ತೆರವು ಮಾಡಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಗರದಲ್ಲಿ ಒತ್ತುವರಿಯಾಗಿರುವ ಮಳೆ ನೀರುಗಾಲುವೆ, ರಾಜಕಾಲುವೆ ಜಾಗವನ್ನು ಸರ್ವೆ ನಡೆಸಬೇಕು. ನಂತರ ಒತ್ತುವರಿ ತೆರವುಗೊಳಿಸಬೇಕು. ಕೆರೆ ಜಾಗದ ಒತ್ತುವರಿ ತೆರವುಗೊಳಿಸುವುದಲ್ಲದೇ ಭವಿಷ್ಯದಲ್ಲಿ ಕೆರೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿತ್ತು. ಅಲ್ಲದೇ, ಆ ಆದೇಶದ ಪಾಲನೆಗೆ ಕೈಗೊಂಡ ಕ್ರಮಗಳ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಸೂಚಿಸಿತ್ತು.
ವಿಚಾರಣೆಯನ್ನು ಜು.೧೩ಕ್ಕೆ ಮುಂದೂಡಿಕೆ: ಅರ್ಜಿ ಮತ್ತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲರು ಹಾಜರಾಗಿ, ಹೈಕೋರ್ಟ್‌ನ ಹಿಂದಿನ ಆದೇಶದಂತೆ ನಗರದಲ್ಲಿರುವ ರಾಜಕಾಲುವೆ, ಮಳೆ ನೀರುಗಾಲುವೆ, ಕೆರೆ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ಕುರಿತ ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೋರಿದರು. ಆ ಮನವಿ ಪುರಸ್ಕರಿಸಿದ ಹೈಕೋರ್ಟ್, ಎರಡು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆಯನ್ನು ಜು.೧೩ಕ್ಕೆ ಮುಂದೂಡಿತು.
ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಸ್ಥಗಿತ, ಬಿಬಿಎಂಪಿಗೆ ಹಿನ್ನಡೆ: ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಇತ್ತೀಚೆಗೆ ಹಿನ್ನಡೆಯಾಗಿತ್ತು. ಹೌದು, ಇಲಾಖೆಗಳ ನಡುವಿನ ಸಮನ್ವಯ ಕೊರತೆ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಮುಜುಗರಕ್ಕೆ ಒಳಗಾಗಿದ್ದರು. ಸೆಪ್ಟೆಂಬರ್ನಲ್ಲಿ ತಡೆಯಾಜ್ಞೆ ಕೊಟ್ಟಿದ್ದರೂ, ಈ ವಿಚಾರವನ್ನು ಬಿಬಿಎಂಪಿಗೆ ಉತ್ತರ ವಿಭಾಗ ತಹಶೀಲ್ದಾರ್ ಗಮನಕ್ಕೆ ತಂದಿರಲಿಲ್ಲ. ಜೂನ್ 17ರಂದು ಖುದ್ದಾಗಿ ಬಂದು ಕೊಟ್ಟಿದ್ದರಿಂದ. ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತ್ತು. ಜೂನ್ 15 ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಈ ಕುರಿತು ಗಮನಕ್ಕೆ ತರದೇ ಇರುವ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು.
ಮಳೆಗಾಲದಲ್ಲಿ ಪ್ರವಾಹದ ಭೀತಿ ಉಂಟಾಗುವ ಹಿನ್ನೆಲೆ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ, ರಾಜ್ಯ ಸರ್ಕಾರ, ರಾಜ ಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಯುದ್ಧ ಸಾರಿತ್ತು. ಹಲವು ದಿನಗಳ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ, ಬುಲ್ಡೋಜರ್‌ಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ಹಿಂದೆ ಮಳೆ ನೀರಿನಿಂದ ಬೆಂಗಳೂರಿನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗಿತ್ತು. ಇದರಿಂದ ರಾಜ ಕಾಲುವೆಗಳ ಒತ್ತುವರಿ ಪ್ರವಾಹ ಪರಿಸ್ಥಿತಿಗೂ ಕೂಡ ಕಾರಣವಾಗಿತ್ತು. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಅನೇಕ ಟೀಕೆ ವ್ಯಕ್ತವಾಗಿದ್ದವು. ಇದರಿಂದ ಹೊಸ ಸರ್ಕಾರ ರಾಜಕಾಲುವೆ ಮೇಲಿರುವ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲು ಜೆಸಿಬಿ ಯಂತ್ರಗಳು ಬಂದಿದ್ದವು.
ಇದನ್ನೂ ಓದಿ: ರಾಜ್ಯದ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ; ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ನೀಡುವುದು ಬಾಕಿ- ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ